ಶಿರಸಿ: ಸ್ವರ್ಣವಲ್ಲೀ ಗಣಪನ ಸೀಮೋಲ್ಲಂಘನಕ್ಕೂ ಈಗ ಕರೋನಾ ಕಾಟ ಕಾಡಿದೆ. ಪ್ರತಿ ವರ್ಷ ಪುಣಾಕ್ಕೆ ಸಾಗುತ್ತಿದ್ದ ಗಣಪ ಕಳೆದ ಎರಡು ವರ್ಷಗಳಿಂದ ತನ್ನ ಪ್ರಯಾಣ ನಿಲ್ಲಿಸಿದ್ದಾನೆ. ಹೌದು.! ಗಣೇಶ ಚೌತಿ ಬಂತೆಂದರೆ ಸ್ವರ್ಣವಲ್ಲೀಯಲ್ಲಿ ಕಲಾವಿದರು ತಯಾರಿಸುವ ಗಣಪನಿಗೆ ಅತ್ಯಧಿಕ ಬೇಡಿಕೆ ಬರುತ್ತಿತ್ತು. ವಿಶೇಷವಾಗಿ ಮಹಾರಾಷ್ಟ್ರದ ಪುಣಾ ಮತ್ತು ಮುಂಬೈನಿಂದ ಇಲ್ಲಿಯ ಮೂರ್ತಿಗಳಿಗೆ ಬೇಡಿಕೆ ಬರುತ್ತಿತ್ತು. ಇದಕ್ಕೆ ಕಾರಣ ಸ್ವರ್ಣವಲ್ಲೀ ಗುಡಿಗಾರರ ಕಲೆಯಲ್ಲಿನ ಕೈಚಳಕ ಮತ್ತು ನೈಸರ್ಗಿಕತೆ.
ಇಲ್ಲಿಯ ಕಲಾವಿದರಾದ ಶೈಲೇಶ, ವಿನಾಯಕ ಗುಡಿಗಾರ ಗಣಪತಿಯನ್ನು ಕುಂಕುಮ, ಅರಿಶಿಣ, ಕೆಮ್ಮಣ್ಣು, ಸುಣ್ಣ ಹಾಗೂ ಇನ್ನಿತರ ನೈಸರ್ಗಿಕ ಬಣ್ಣವನ್ನು ಬಳಸಿ ಗಣಪತಿ ತಯಾರಿಸುತ್ತಾರೆ. ಜೂನ್ ತಿಂಗಳಿನಲ್ಲಿಯೇ ಗಣಪತಿ ಸಿದ್ಧಪಡಿಸಿ ಪುಣಾ ಮತ್ತು ಮುಂಬೈಗೆ ಕಳಿಸಿಕೊಡಲಾಗುತ್ತಿತ್ತು. ವಿಸರ್ಜನೆಯ ವೇಳೆ ಕೆರೆ ನೀರಿಗೆ ಧಕ್ಕೆ ಉಂಟುಮಾಡದ ಬಣ್ಣದಿಂದಾಗಿ ಪುಣಾದಲ್ಲಿಯೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿತ್ತು. ಆದರೆ, ಕಳೆದ ವರ್ಷದಿಂದ ಕೊವಿಡ್ ಕಾಟಕ್ಕೆ ಪುಣಾಕ್ಕೆ ಗಣಪತಿ ಕಳಿಸಿಕೊಡುವುದು ಕಷ್ಟವಾಗಿದೆ. ಇದೇ ಪರಿಸ್ಥಿತಿ ಈ ವರ್ಷವೂ ಮುಂದುವರಿದಿದೆ. ಕೊವಿಡ್ ಗಣಪನ ಸೀಮೋಲ್ಲಂಘನಕ್ಕೂ ತೊಡಕು ಮಾಡಿದೆ.
ಕಳೆದ ವರ್ಷದಿಂದ ನೈಸರ್ಗಿಕ ಬಣ್ಣದ ಗಣಪನನ್ನು ಪುಣಾಕ್ಕೆ ಕಳಿಸಲು ಸಾಧ್ಯವಾಗುತ್ತಿಲ್ಲ. ಪುಣಾದ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದು, ಮುಂದೆ ಪರಿಸ್ಥಿತಿ ಸರಿಯಾದ ಬಳಿಕ ಮತ್ತೆ ಗಣಪತಿಯನ್ನು ಕಳಿಸಲು ಸಾಧ್ಯವಾಗಬಹುದು ಎಂಬ ಆಶಯ ಹೊಂದಿದ್ದೇವೆ.
– ವಿನಾಯಕ ಗುಡಿಗಾರ, ಸ್ವರ್ಣವಲ್ಲೀ