ಸಿ ಆರ್ ಝೆಡ್ ವಲಯದಲ್ಲಿ ಚತುಷ್ಪತ ಕಾಮಗಾರಿಗೆ ನಿರ್ಬಂಧ.! ವಾಣಿಜ್ಯ ಬಂದರು ನಿರ್ಮಾಣಕ್ಕೂ ಬ್ರೇಕ್.!

ಹೊನ್ನಾವರ: ತಾಲೂಕಿನ ಕಾಸರಕೋಡಿನ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ಕಾಮಗಾರಿ ನಡೆಸದಂತೆ ಇತ್ತೀಚೆಗೆ ತಡೆ ನೀಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಚೆನ್ನೈನ ಪೀಠವು ತನ್ನ ಮೂಲ ಅದೇಶಕ್ಕೆ ಪೂರಕವಾಗಿ ಈಗ ಇನ್ನಷ್ಟು ವಿವರಣೆ ಸಹಿತ ವಿಸ್ತೃತ ಆದೇಶ ಹೊರಡಿಸಿದೆ.

ಕಾಸರಕೋಡ ಸಮುದ್ರ ತೀರದಿಂದ ಉದ್ದೇಶಿತ ಎಚ್ ಪಿಪಿಎಲ್ ಕಂಪನಿಯು ನಿರ್ಮಿಸುತ್ತಿರುವ ವಾಣಿಜ್ಯ ಬಂದರು ಯೋಜನಾ ಪ್ರದೇಶದ 4 ಕಿ.ಮೀ ವರೆಗಿನ, ಸಮುದ್ರದ ಉಬ್ಬರ ರೇಖೆಯಿಂದ 200 ಮೀಟರವರೆಗಿನ ಅಭಿವೃದ್ಧಿ ನಿಷೇಧಿತ ಪ್ರದೇಶದಲ್ಲಿ ಬಂದರು ಮತ್ತು ಅರಣ್ಯ ಜಮೀನೂ ಸೇರಿದಂತೆ ಸಿ ಆರ್ ಜಡ್ ವಲಯದಲ್ಲಿ ರಸ್ತೆ ಅಥವಾ ಚತುಷ್ಪತ ರಸ್ತೆ ನಿರ್ಮಿಸದಂತೆ ನಿರ್ಬಂಧ ಹೇರಿ ತಡೆಯಾಜ್ಞೆ ನೀಡಿದೆ.

ವಾಣಿಜ್ಯಬಂದರು ನಿರ್ಮಾಣಯೋಜನೆಗಾಗಿ ನಿಗದಿತ ಸ್ಥಳ ಉಲ್ಲೇಖಿಸಿ ನೀಡಿರುವ ಪರಿಸರ ಅನಾಪೇಕ್ಷಣೆಯು, ಅಭಿವೃದ್ಧಿ ನಿಷೇದಿತ ಸಿಆರ್ ಝೆಡ್ ಪ್ರದೇಶದಲ್ಲಿ ಈ ಯೋಜನೆಗಾಗಿ ರಸ್ತೆ ನಿರ್ಮಿಸಲು ಪರವಾನಿಗೆ ಎಂದು ಪರಿಗಣಿಸಲಾಗದು ಎಂದು ನ್ಯಾಯಾಧಿಕರಣವು ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ. ಪ್ರಾಯೋಜಕರು ಮತ್ತು ಬಂದರು ಇಲಾಖೆಯು 2011ರ ಸಿ.ಆರ್. ಝೆಡ್ ನಿಯಮವನ್ನು ಉಲ್ಲಂಘಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಪ್ರಾಧಿಕಾರಗಳಿಗೆ ಈಗ ಪುನಃ ಸೂಚಿಸಿದೆ. ಇದರಿಂದ ಹೊನ್ನಾವರ ಕಾಸರಕೋಡಿನಲ್ಲಿ ಎಚ್ ಪಿಪಿಎಲ್ ಕಂಪನಿಯು ಬಂದರು ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ಯೋಜನೆ ಪುನಃ ನೆನೆಗುದಿಗೆ ಬಿದ್ದಿದ್ದು, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಎಸ್ ಎಲ್ ಪಿಯ ವಿಚಾರಣೆಯ ನಂತರವೇ ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದ ಕುರಿತಾದ ಉಹಾಪೋಹಗಳಿಗೆ ತೆರೆಬೀಳಲಿದೆ.