ಶಾಲ್ಮಲಾ ಉದ್ಯಾನವನಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ‘ಇಕೊ ಟೂರಿಸಂ’ ಪ್ರಸ್ತಾವನೆ.!

ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಶಾಲ್ಮಲಾ ಉದ್ಯಾನವನದ ನಿರ್ವಹಣೆಗೆ ಕಳೆದ ಮೂರು ವರ್ಷಗಳಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಆಗಮಿಸುವ ಪ್ರವಾಸಿಗಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆ ಇದೀಗ ಪ್ರವಾಸೋದ್ಯಮ ಇಲಾಖೆಯ ‘ಇಕೊ ಟೂರಿಸಂ’ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ.

ಹೌದು.! ನಗರದ ಮತ್ತು ತಾಲೂಕಿನ ಜನತೆಗೆ ಸಂಜೆಯ ವೇಳೆಗೆ ವಾಕಿಂಗ್, ವಿಹಾರಕ್ಕೆ ಸೂಕ್ತ ತಾಣ ನಿರ್ಮಿಸಬೇಕು ಎಂಬುದು ಅರಣ್ಯ ಇಲಾಖೆ ಆಲೋಚನೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರಸ್ತೆ ಚಿಪಗಿ ಬಳಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದ ಜಾಗವನ್ನು ಬಳಕೆ ಮಾಡಿಕೊಂಡು 1.45 ಕೋಟಿ ರೂ ಖರ್ಚು ಮಾಡಿ ಪಾರ್ಕ್ ನಿರ್ಮಿಸಿದೆ. ಗೋಟಗೋಡಿಯ ಪಾರ್ಕ್ ಮಾದರಿಯಲ್ಲಿಯೇ ಈ ಪಾರ್ಕನ್ನೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದೆ.

ಹುಲಿ, ಚಿರತೆ, ಕಾಡುಮೃಗಗಳ ಸಿಮೆಂಟ್ ಆಕೃತಿಗಳ ನಡುವೆ ಜನ ಜೀವನ, ಕೃಷಿ ಬಿಂಬಿಸುವ ಮೂರ್ತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಮಕ್ಕಳಿಗೆ ಆಟಿಗೆಗಳು, ವಿಹಾರಕ್ಕೆ ಕಾರಿಡಾರ್ ನಿರ್ಮಿಸಲಾಗಿದೆ. ನಗರ ಮತ್ತು ತಾಲೂಕಿನ ಜನತೆಗೆ, ಯುವ ಜೋಡಿಗಳಿಗೆ ಕುಳಿತು ಮಾತನಾಡುವ ತಾಣವಾಗಿ ಈ ಪಾರ್ಕ್ ಬಳಕೆ ಆಗುತ್ತಿದೆ. ಸ್ವಚ್ಛತೆ, ಗಿಡಗಳಿಗೆ ನೀರುಣಿಸುವಿಕೆ, ವಾಚ್ ಗಾರ್ಡ್ ಸೇರಿದಂತೆ ಪ್ರಸ್ತುತ 6 ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ವಹಣೆಗೆ ವಾರ್ಷಿಕವಾಗಿ 6 ಲಕ್ಷ ರೂ. ಖರ್ಚು ತಗುಲುತ್ತಿದ್ದು, ಯಾವುದೇ ಅನುದಾನ ಬಿಡುಗಡೆ ಆಗದಿರುವುದು ತಲೆನೋವಾಗಿ ಪರಿಣಮಿಸಿದೆ.

ಹಾಲಿ ಉದ್ಯಾವನಕ್ಕೆ ನಿಗದಿಪಡಿಸಲಾದ ಪ್ರವೇಶ ಫೀ ಹಣದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಕೊವಿಡ್ ಸನ್ನಿವೇಶದಲ್ಲಿ ಹಣ ಸಂಗ್ರಹ ಕೂಡಾ ಆಗಿಲ್ಲ. ಕಳೆದ ವರ್ಷ ಕೇವಲ ಮೂರು ಲಕ್ಷ ರೂ. ಮಾತ್ರ ಉತ್ಪನ್ನವಾಗಿದ್ದು, ಉದ್ಯಾವನ ನಿರ್ವಹಣೆಗೆ ಆರ್ಥಿಕ ಕೊರತೆ ಉಂಟಾಗಿದೆ. ಈ ವರ್ಷ ಇದುವರೆಗೆ 1.25 ಲಕ್ಷ ರೂ. ಸಂಗ್ರಹವಾಗಿದೆ. ಮಳೆಗಾಲದ ಬಳಿಕ ಜಾಸ್ತಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಶಾಲ್ಮಲಾ ಉದ್ಯಾನದ ಒಳಗಡೆ ಅಂಗಡಿಗಳ ಸಂಖ್ಯೆ ಜಾಸ್ತಿಗೊಳಿಸಲು ನಿರ್ಧರಿಸಿದ್ದೇವೆ. ಲಂಡಕನಳ್ಳಿ, ಬಕ್ಕಳ ಉದ್ಯಾನ, ಬನವಾಸಿಯ ಹಾಗೂ ಸಿದ್ದಾಪುರ ಹೊಸೂರು ಉದ್ಯಾನಗಳನ್ನೂ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

– ರಘು ಡಿ, ಎಸಿಎಫ್ ಶಿರಸಿ