ಸಿದ್ದಾಪುರ: ಪ್ರಸಕ್ತ ಸಾಲಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಪಟ್ಟಣ ಪಂಚಾಯತ ವತಿಯಿಂದ ಸಂಪೂರ್ಣ ಸಹಕಾರ ನೀಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಗಣೇಶೋತ್ಸವ ಆಚರಣೆಗೆ ಸಂಪೂರ್ಣ ಸಹಕಾರ ನೀಡಲು ತೀರ್ಮಾನಿಸಲಾಯಿತು.
ಪಟ್ಟಣದಲ್ಲಿ ಪಟಾಕಿ ಅಂಗಡಿ ಹಾಕಲು ಐವರು ಅರ್ಜಿ ಸಲ್ಲಿಸಿದ್ದು ಷರತ್ತಿನೊಂದಿಗೆ ಎಲ್ಲರಿಗೂ ನೆಹರೂ ಮೈದಾನದಲ್ಲಿ ಪಟಾಕಿ ಅಂಗಡಿ ಹಾಕಲು ಅನುಮತಿ ನೀಡಲಾಗಿದೆ. ಪಟಾಕಿಯಿಂದ ಉಂಟಾದ ಕಸವನ್ನು ಪಟ್ಟಣ ಪಂಚಾಯಿತಿ ವಾಹನಕ್ಕೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ತಿಳಿಸಿದರು.
ಪಪಂ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ, ತಿಂಗಳಿಗೊಮ್ಮೆ ಸಭೆಗೆ ಹಾಜರಾಗಿ ಪಟ್ಟಣ ಪಂಚಾಯತನ ಖರ್ಚು ವೆಚ್ಚಗಳಿಗೆ ಅನುಮೋದನೆ ನೀಡುವುದು ಬಿಟ್ಟರೆ ನಮಗೆ ಮತ ನೀಡಿ ಆಯ್ಕೆ ಮಾಡಿದ ವಾರ್ಡಿನಲ್ಲಿ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉಳಿದಂತೆ ಸಭೆಯಲ್ಲಿ ಕುಡಿಯುವ ನೀರು, ಮನೆ ಕರವಸೂಲಿ, ಕಾಮಗಾರಿಗಳ ಪ್ರಗತಿ, ಅಂಗಡಿ ಕರ ವಸೂಲಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಈ ವೇಳೆ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿ ಕುಮಾರ್ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ್ ಹೊನ್ನೆಗುಂಡಿ ಉಪಸ್ಥಿತರಿದ್ದರು.