ಈ-ಪ್ರೊಕ್ಯೂರಮೆಂಟ್ ರದ್ದುಗೊಳಿಸಿ ಬಹಿರಂಗ ಹರಾಜಿಗೆ ಅವಕಾಶ ಕೊಡಿ

ಶಿರಸಿ: ಮೀನು ಮರಿಗಳನ್ನು ಕೆರೆಯಲ್ಲಿ ಬಿಡಲು ಮೀನುಗಾರಿಕೆಯಿಂದ ಹೊಸದಾಗಿ ಜಾರಿಗೆ ತಂದಿರುವ ಈ- ಪ್ರೊಕ್ಯೂರಮೆಂಟ್ ಟೆಂಡರನ್ನು ರದ್ದುಗೊಳಿಸಿ ಹಿಂದಿನಂತೆಯೇ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ತಾಲೂಕಿನ 13 ಕ್ಕೂ ಅಧಿಕ ಗ್ರಾಮದ ಕೆರೆಗಳ ಮಾಲೀಕರು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಸದಸ್ಯ ಸುನೀಲ್ ನಾಯ್ಕ, ಮೀನುಗಾರಿಕೆ ಇಲಾಖೆಯವರು ಪ್ರೊಕ್ಯೂರಮೆಂಟ್ ಟೆಂಡರ್ ಪದ್ದತಿಯನ್ನು ಜಾರಿಗೆ ತರುತ್ತಿರುವದನ್ನು ನಾವು ಖಂಡಿಸುತ್ತೇವೆ. ಹೊಸ ಟೆಂಡರ್ ಜಾರಿ ಮಾಡದೇ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಡಬೇಕು. ಈ ಪ್ರೊಕ್ಯೂರಮೆಂಟ್ ಟೆಂಡರ್ ಜಾರಿಗೆ ತರುವುದರಿಂದ ಕೆರೆಯ ಲಾಭ ಗ್ರಾಮಸ್ಥರ ಹೊರತಾಗಿ ಇನ್ನಾರೋ ಪಡೆಯುವ ಸಾದ್ಯತೆ ಇರುತ್ತದೆ. ಇದರಿಂದ ಗ್ರಾಮಸ್ಥರಿಗೆ ತಮ್ಮ ಕೆರೆಯ ರಕ್ಷಣೆಮಾಡಿಕೊಳ್ಳಲಾಗದೇ ಅಶಾಂತಿಗೆ ಕಾರಣವಾಗಬಹುದು. ಬಹಿರಂಗ ಹರಾಜಿನ ಲಾಭ ಗ್ರಾಮಸ್ಥರಿಗೆ ಆಗುವುದರಿಂದ ಕೆರೆಯ ರಕ್ಷಣೆ, ಕೆರೆಯಲ್ಲಿರುವ ಮೀನಿನ ರಕ್ಷಣೆಯ ಜೊತೆಗೆ ಬಂದ ಲಾಭದಲ್ಲಿ ಗ್ರಾಮದ ದೇವಸ್ಥಾನ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಟರಾಜ ಬಿ ಹೊಸೂರ್, ರಾಘವೇಂದ್ರ ಎಸ್ ಗಾಣಿಗ , ಮಲ್ಲಿಕಾರ್ಜುನ ಪಾಟೀಲ್, ಶ್ರೀಧರ ನಾಯ್ಕ, ತುಕರಾಮ ನಾಯ್ಕ, ಮುಂತಾದವರು ಇದ್ದರು.