ಪತ್ನಿ ಸಾವಿನಿಂದ ಮನನೊಂದು ಪತಿಯೂ ಆತ್ಮಹತ್ಯೆ: ಝುಂಜರವಾಡದಲ್ಲೊಂದು ಮನಕಲಕುವ ಘಟನೆ.!

ಚಿಕ್ಕೋಡಿ: ಪತ್ನಿ ಸಾವನ್ನಪ್ಪಿದ ಎರಡೇ ದಿನದಲ್ಲಿ ಮನನೊಂದ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ.

ಸದಾಶಿವ ರಾಮಪ್ಪ ಕಾಂಬಳೆ (29) ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಯಿತು. ಆದರೂ ಬೆಂಕಿಯ ಕೆನ್ನಾಲಿಗೆ ಆತನ ದೇಹ ಶೇ. 80 ರಷ್ಟು ಸುಟ್ಟು ಹೋಗಿದ್ದರಿಂದ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸದಾಶಿವ ಮೃತಪಟ್ಟಿದ್ದಾನೆ.

ಕೇವಲ‌ ಎರಡು ದಿನಗಳ ಹಿಂದಷ್ಟೆ ಸದಾಶಿವ ಪತ್ನಿ ರೂಪಾ ಕಾಂಬಳೆ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಮನನೊಂದಿದ ಪತಿ ಸದಾಶಿವ ಆತ್ಮಹತ್ಯೆಗೆ ಯತ್ನಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನು ಈ ಜೋಡಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು. ಬಾಳಿ ಬದುಕಬೇಕಿದ್ದ ಜೋಡಿಗಳ ಬದುಕಲ್ಲಿ ವಿಧಿ ತನ್ನ ಕ್ರೂರ ಆಟವಾಡಿದ್ದು, ಪತಿ-ಪತ್ನಿಯ ಸಾವಿನಿಂದ ಇಡೀ ಝುಂಜರವಾಡ ಗ್ರಾಮ ಮೌನವಾಗಿದೆ.