ಐವರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢ.!

ಕಾರವಾರ: ಮಾದಕ ವ್ಯಸನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಆಗಸ್ಟ್ 20 ರಂದು ಶಿರಸಿ ಪೊಲೀಸರು ವಶಕ್ಕೆ ಪಡೆದಿದ್ದ ಐವರು ಆರೋಪಿಗಳು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಈ ಬಗ್ಗೆ ಕಾರವಾರದ ಎಸ್.ಪಿ. ಕಚೇರಿಯಿಂದ ಭಾನುವಾರ ಪತ್ರಿಕಾ ಹೇಳಿಕೆ ನೀಡಲಾಗಿದೆ. ಶಿರಸಿ ಕಸ್ತೂರಬಾ ನಗರದವರಾದ ಇಸ್ಮಾಯಿಲ್ ಸಲಿಂ ಯಾದವಾಡ್, ಅಬ್ದುಲ್ ಅಜಿಂ ಶೇಖ್, ಮಕ್ಬುಲ್ ಅಹ್ಮದ್ ಮಾಳಾಪುರ, ಹುಬ್ಬಳ್ಳಿ ರಸ್ತೆಯ ನಿವಾಸಿ ಅನುರಾಗ ಜೋಗಳೇಕರ ಹಾಗೂ ಮೂಲತಃ ಯಲ್ಲಾಪುರ ಉದ್ಯಮನಗರದ ಸದ್ಯ ಶಿರಸಿಯ ಕೆನರಾಗಲ್ಲಿಯ ನಿವಾಸಿ ಇರ್ಷಾದ ಅಲ್ಲಾವುದ್ದೀನ್ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ.

ಆಗಸ್ಟ್ 20 ರಂದು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶಿರಸಿ ಪಟ್ಟಣದ ಕಸದಗುಡ್ಡೆಗೆ ಹೋಗುವ ರಸ್ತೆಯಲ್ಲಿ ವಶಕ್ಕೆ ಪಡೆದು ಬಳಿಕ ಅವರ ವೈದ್ಯಕೀಯ ಪರೀಕ್ಷೆಗೆಂದು ಕಾರವಾರದ ಕಿಮ್ಸ್ ಗೆ ರವಾನಿಸಿದ್ದರು. ಭಾನುವಾರ ವರದಿ ಬಂದಿದ್ದು ಐವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎನ್.ಡಿ.ಒಇ.ಎಸ್. ಕಾಯ್ದೆ 1985 ರ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಎಸ್.ಪಿ. ಡಾ. ಸುಮನ್ ಪನ್ನೇಕರ ನಿರ್ದೇಶನದಲ್ಲಿ ಅಡಿಶನಲ್ ಎಸ್.ಪಿ. ಎಸ್. ಬದರಿನಾಥ ಶಿರಸಿ ಡಿವೈಎಸ್‌ಪಿ ರವಿ ಡಿ. ನಾಯ್ಕ, ಸಿಪಿಐ ಕುಮಾರ ಕೆ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರ ನೇತೃರತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.