ಗೋಕರ್ಣ: ಸೇವೆಯಲ್ಲಿರುವ ಸಮಾಧಾನ, ಸಂತೋಷ ಭೋಗದಲ್ಲಿಲ್ಲ. ಯುವಶಕ್ತಿಯನ್ನು ಭೋಗದ ಜತೆ ಜೋಡಿಸದೇ, ಸೇವೆಯ ಜತೆ ಜೋಡಿಸುವ ಕಾರ್ಯ ಆಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸೇವಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಯುವಶಕ್ತಿ ಮತ್ತು ಸೇವೆ ಇಂದಿನ ಸಮಾಜದಲ್ಲಿ ಅಪಮೌಲ್ಯವಾಗಿದೆ. ಪ್ರಕೃತಿಯ, ದೇಶದ, ಸಮಾಜದ ಮತ್ತು ನಮ್ಮಿಂದ ಶ್ರೇಷ್ಠರ ಸೇವೆ ಮಾಡುವ ಮೂಲಕ ನಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇವೆ ಮಾಡದಿದ್ದರೆ ಬದುಕು ಪೂರ್ಣವಾಗುವುದಿಲ್ಲ. ದೇಶಕ್ಕೆ, ದೇವರಿಗೆ, ಸಮಾಜಕ್ಕೆ, ಗುರುಸ್ಥಾನಕ್ಕೆ ಸೇವೆ ಮಾಡುವ ಸಂಕಲ್ಪ ತೊಡಿ. ಸೇವೆ ಇಲ್ಲದಿದ್ದರೆ ಜೀವನ ವ್ಯರ್ಥ. ಯುವಕರೆಲ್ಲ ಸೇವಕರಾಗಬೇಕು; ಸೇವಕರೆಲ್ಲ ಯುವಕರಾಗಿಯೇ ಇರಬೇಕು. ಮುಪ್ಪಿಗೆ ಮದ್ದು ಸೇವೆ. ಸೇವೆಯಿಂದ ನಾವು ಶಾಶ್ವತರಾಗುತ್ತೇವೆ. ಮುಪ್ಪು- ಸಾವುಗಳಿಲ್ಲದ ಸ್ಥಿತಿಗೆ ಬರಲು ಸಾಧ್ಯ. ಸೇವೆಯ ಮೂಲಕ ನಾವು ಅಜರಾಮರ, ಅಮರರಾಗಬಹುದು ಎಂದು ಹೇಳಿದರು.
ರಾಷ್ಟ್ರಕ್ಕಾಗಿ ಜೀವ ಕೊಡುವ ಸೈನಿಕ ಎಷ್ಟು ಶ್ರೇಷ್ಠವೋ, ದೇಶಕ್ಕಾಗಿ ಸೇವೆಯ ಮೂಲಕ ಜೀವನ ನೀಡುವ ವ್ಯಕ್ತಿ ಕೂಡಾ ಅಷ್ಟೇ ಶ್ರೇಷ್ಠ. ಸತ್ಯ ಹಾಗೂ ತತ್ವಕ್ಕೆ ಜೀವನವನ್ನು ಸಮರ್ಪಣೆ ಮಾಡಿಕೊಂಡವರು ನಿಜವಾದ ಯೋಗಿಗಳು. ಧರ್ಮಕ್ಕೆ, ರಾಷ್ಟ್ರಕ್ಕೆ, ಪರಂಪರೆಗೆ ಸಮರ್ಪಣೆ ಮಾಡಿಕೊಂಡ ಜೀವನ ಸರ್ವಶ್ರೇಷ್ಠ ಎಂದರು.
ಅಂಕಣಕಾರ ರೋಹಿತ್ ಚಕ್ರತೀರ್ಥ ಮಾತನಾಡಿ, ನಮ್ಮಿಂದ ಸೇವೆ ಪಡೆದವರು ಕೂಡಾ ಸಂತುಷ್ಟರಾಗುವಂತಿರಬೇಕು. ತೋರಿಕೆಯ ಸೇವೆ ಬೇಡ; ಇದರಿಂದ ಯಾವ ಉಪಯೋಗವೂ ಇಲ್ಲ. ಜಗತ್ತಿನ ಎಲ್ಲರಿಗೂ ಸಲ್ಲುವ ಸೇವೆ ನಿಜವಾದ ಸೇವೆ ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಮ್ಮಲ್ಲಿ ವಿಕಾಸದ ಕಥೆಯನ್ನು ಉಪನಿಷತ್‍ಗಳಲ್ಲಿ ಹೇಳಿದೆ. ಆಕಾಶ, ವಾಯು, ಅಗ್ನಿ, ನೀರು, ಮಣ್ಣು ಹೀಗೆ ಪಂಚಭೂತಗಳಿಂದ ನಮ್ಮ ವಿಕಾಸವಾಗಿದೆ ಎನ್ನುವುದು ಭಾರತೀಯ ಪರಿಕಲ್ಪನೆ ಎಂದು ಪ್ರತಿಪಾದಿಸಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹೇಶ್ ಕಜೆ, ಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ಉಪಸ್ಥಿತರಿದ್ದರು.