ಕಾರವಾರ: ಮಾರುಕಟ್ಟೆಗಳಿಗೆ ಅದೆಷ್ಟೇ ತರಕಾರಿ ಬಂದರೂ ಕೂಡಾ ಜನ ಸಾವಯವ ಕೃಷಿಯ ತರಕಾರಿಗಳನ್ನೆ ಹೆಚ್ಚು ಇಷ್ಟಪಡುತ್ತಾರೆ. ಅದರಂತೆ ಇಲ್ಲೊಂದು ಗ್ರಾಮದಲ್ಲಿ ಸಾವಯವ ಕೃಷಿ ಪದ್ದತಿ ಮೂಲಕ ಹೆಚ್ಚು ತರಕಾರಿಗಳನ್ನು ಬೆಳೆದು ಸ್ಥಳೀಯವಾಗಿ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಮಾರಾಟ ಮಾಡಿ ಒಂದಿಷ್ಟು ಕಾಸು ಸಂಪಾದಿಸುತ್ತಿದ್ದರು. ಆದರೆ ಈ ಬಾರಿ ಸುರಿದ ಭಾರೀ ಮಳೆ ಹಾಗೂ ಬಿಸಿಲಿನಿಂದಾಗಿ ಸಮರ್ಪಕವಾಗಿ ಬೆಳೆ ಸಿಗದೆ ರೈತರು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ.
ಸಾವಯವ ತರಕಾರಿಗೆ ಎಲ್ಲಿಲ್ಲದ ಬೇಡಿಕೆ.!
ಹೌದು.! ಕಾರವಾರ ತಾಲೂಕಿನ ಕಡವಾಡ ಗ್ರಾಮದ ರೈತರಿಗೆ ಶ್ರಾವಣ ಬಂತಂದ್ರೆ ಸುಗ್ಗಿಯ ಸಂಭ್ರಮ. ಗ್ರಾಮದ ನೂರಾರು ರೈತರು ತಮ್ಮ ತುಂಡು ಭೂಮಿಯಲ್ಲಿಯೇ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ. ಕೇವಲ ಸಗಣಿ ಗೊಬ್ಬರ ಮಾತ್ರ ಬಳಕೆ ಮಾಡುವುದರಿಂದ ಇಲ್ಲಿ ಬೆಳೆದ ತರಕಾರಿಗೆ ಸ್ಥಳೀಯವಾಗಿ ಮಾತ್ರವಲ್ಲದೆ ಪಕ್ಕದ ಗೋವಾದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಅಲ್ಲದೆ ತರಕಾರಿ ತಿನ್ನಲು ಕೂಡ ತುಂಬಾ ರುಚಿಕಟ್ಟಾಗಿರುವುದರಿಂದ ಜನ ಕೂಡ ತರಕಾರಿಯನ್ನು ಹೆಚ್ಚು ಇಷ್ಟಪಡುತ್ತಾರೆ.
ಕೃಷಿಕರನ್ನು ಸಂಕಷ್ಟಕ್ಕೆ ದೂಡಿದ ಮಳೆರಾಯ.!
ಈ ಬಾರಿಯ ಮಳೆ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಯಿ ಬಿಡುವ ವೇಳೆಗೆ ಭಾರೀ ಮಳೆಯಾದ ಕಾರಣ ತರಕಾರಿಗಳು ಕೊಳೆತಿರುವುದು ಒಂದೆಡೆಯಾದರೆ ಇದೀಗ ಬಿಸಿಲಿನ ಕಾರಣಕ್ಕೆ ಬಳ್ಳಿಗಳು ಹಳದಿಯಾಗಿ ತನ್ನಿಂದಾಗಿಯೇ ಕೊಳೆತು ಹೋಗುತ್ತಿವೆ.
ಅಲ್ಲದೆ ಈ ಬಿಸಿಲು ಮಳೆಯಿಂದಾಗಿ ಇಳುವರಿ ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೊತೆಗೆ ಹಕ್ಕಿಗಳ ಕಾಟದಿಂದಾಗಿ ಬೆಳೆದ ಬೆಳೆಗೆ ಕೂಲಿಯೂ ಹುಟ್ಟದ ಸ್ಥಿತಿ ಇದ್ದು ಈ ಬಾರಿ ತುಂಬಾ ನಷ್ಟ ಅನುಭವಿಸಿದ್ದೇವೆ ಎನ್ನುತ್ತಾರೆ ರೈತರು.
ಹೀರೆ, ಬಸಳೆ ಹೀಗೆ ವೆರೈಟಿ ವೆರೈಟಿ ತರಕಾರಿ ಬೆಳೆಯುವ ರೈತರು.!
ಇನ್ನು ಕಡವಾಡ ಗ್ರಾಮದ ಬಹುತೇಕ ರೈತರು ತಮ್ಮ ತಮ್ಮಲ್ಲಿರುವ ತುಂಡು ಭೂಮಿಯಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಬಸಲೆ, ಕೆಂಪು ಬಾಜಿಗಳನ್ನು ಬೆಳೆದು ಉಪಜೀವನ ನಡೆಸುವ ರೈತರು ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಪುರುಷರು ಜಮೀನಿನ ಆರೈಕೆ ಮಾಡಿದ್ರೆ, ಮಹಿಳೆಯರು ತರಕಾರಿಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಾರೆ.
ಸಾಲ ಮಾಡಿ ತರಕಾರಿ ಬೆಳೆದ ರೈತರು ಕಂಗಾಲು.!
ಸ್ಥಳೀಯವಾಗಿ ಮಾತ್ರವಲ್ಲದೆ ಪಕ್ಕದ ಗೋವಾ ಮಹಾರಾಷ್ಟ್ರ ಭಾಗಗಳಿಗೂ ಇಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಸಿಗುವ ಒಂದಿಷ್ಟು ತರಕಾರಿಗಳನ್ನು ಸ್ಥಳೀಯವಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ.
ದಿನವಿಡಿ ದುಡಿದು ಮಾಡಿದ ಬೆಳೆ ಮಳೆ ಹಾಗೂ ಬಿಸಿಲಿಗೆ ಹಾನಿಯಾಗಿದೆ. ಆದರೆ ನಮಗಾಗಿರುವ ನಷ್ಟವನ್ನು ಯಾವ ಅಧಿಕಾರಿಗಳು ನೋಡುವುದಿಲ್ಲ. ಸಂಘದಲ್ಲಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಇದೀಗ ನಷ್ಟವಾದರೂ ಯಾವ ಪರಿಹಾರವೂ ಸಿಗುತ್ತಿಲ್ಲ ಎಂದು ರೈತ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳೆಹಾನಿಗೆ ಪರಿಹಾರ ಒದಗಿಸಿ.!
ಒಟ್ಟಿನಲ್ಲಿ ಸಾವಯವ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಮಳೆ ದೊಡ್ಡ ಆಘಾತ ನೀಡಿದೆ. ಇರುವ ಅಲ್ಪ ಜಮೀನಿನಲ್ಲಿಯೇ ಉತ್ಸಾಹವಹಿಸಿ ಸಾವಯವ ಕೃಷಿ ಪದ್ದತಿ ಮೂಲಕ ಬೆಳೆ ಬೆಳೆಯುವವರ ಹಾನಿಗೆ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.