ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕೆಂದು ಪ್ರತಿಪಾದಿಸಿದವರು ದಿ. ದೇವರಾಜ ಅರಸ್ – ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರ: ಸಮಾಜದಲ್ಲಿನ ಪ್ರತಿ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಬರುವಂತೆ ಆತ್ಮವಿಶ್ವಾಸ ತುಂಬಿದವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ರವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 107 ನೇ ಜನ್ಮದಿನಾಚರಣೆ ಮತ್ತು ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕು. ಎಲ್ಲರಿಗೂ ಬದುಕುವ, ಮುಖ್ಯವಾಹಿನಿಗೆ ಬಂದು ಸಾಧಿಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದವರು ಅರಸುರವರು ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲರೂ ಹೊಟ್ಟೆ ತುಂಬ ಊಟ ಮಾಡುವಂತೆ ಮಾಡಿದರು. ಜೀತಪದ್ದತಿ, ಮಲಹೊರುವ ಪದ್ದತಿಯನ್ನು ನಿಷೇಧಿಸುವ ಮೂಲಕ ದಾಸ್ಯದ ಜೀವನವನ್ನು ಕೊನೆಗಾಣಿಸಿದ ಮೇರು ವ್ಯಕ್ತಿ ದೇವರಾಜ ಅರಸು ರವರು ಎಂದು ಹೇಳಿದರು.

ಮಾಜಿ ಶಾಸಕ ಪ್ರಮೋದ ಮಧ್ವರಾಜ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪನೆ, ಬಡವರ ಕಲ್ಯಾಣಕ್ಕಾಗಿ, ಹಸಿವು ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ಬಡ ಗೇಣಿದಾರ, ರೈತರಿಗೆ ಉಳುವವನೇ ಹೊಲದೊಡೆಯ ಕಾಯ್ದೆಯಂತೆ ಭೂಮಿ ನೀಡುವಲ್ಲಿ ಶ್ರಮಿವಹಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸುರವರು ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಅರಸುರವರ ಜೀವನ ನಮಗೆಲ್ಲ ದಾರಿದೀಪವಾಗಿದೆ. ಅವರ ಕೊಡುಗೆಯನ್ನುಂಡ ಫಲಾನುಭವಿಗಳು ನಾವೆಲ್ಲರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆಯೋಣ, ಅವರಂತೆಯೇ ನಾವೆಲ್ಲ ಸಮಾಜದ ಬಡವರ, ನಿರ್ಗತಿಕರ, ಶೋಷಿತರ, ಮಹಿಳೆ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸೋಣ ಎಂದು ಹೇಳಿದರು.

ಧಾರವಾಡದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಂದ್ರಪ್ಪ ಬಕಾಯಿ ಉಪನ್ಯಾಸ ನೀಡಿ, ಸರ್ವರಿಗೂ ಸಾಮಾಜಿಕ ನ್ಯಾಯ, ಸಮಾನತೆ ಒದಗಿಸಿಕೊಟ್ಟ ಮಹಾನ್ ನಾಯಕ ದೇವರಾಜ ಅರಸು. ಭೂ ಸುಧಾರಣೆ ಕಾಯ್ದೆ ಮೂಲಕ 15ಲಕ್ಷ ಗೇಣಿದಾರರಿಗೆ 20 ಲಕ್ಷ ಕೃಷಿ ಕಾರ್ಮಿಕರಿಗೆ ಭೂಮಿ ನೀಡಿದ್ದಾರೆ. ಮಲಹೊರುವ ಪದ್ದತಿ, ಜೀತ ಪದ್ಧತಿ ನಿಷೇಧ ಮಾಡುವ ಮೂಲಕ ವ್ಯಕ್ತಿ ಸತ್ತರೂ ಅವರ ವಿಚಾರಧಾರೆಗಳು ಸಾಯುವುದಿಲ್ಲ ಎಂಬ ನಾಣ್ಣುಡಿಯಂತೆ ಅವರ ಜೀವನ ನಮಗೆ ಸ್ಪೂರ್ತಿಯಾಗಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಜಯಾನಂದ ಡೇರೇಕರ್ ಮತ್ತು ಲಕ್ಷ್ಮಣ ಬಕಾಯಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.