ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಸೆ – ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರ: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶೀನಿವಾಸ ಪೂಜಾರಿ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ನಾಯಕನಿಗೆ ಯಾವುದೇ ಅಡೆತಡೆ ಇಲ್ಲದೇ ಕೆಲಸ ಮಾಡುವ ಅವಕಾಶವಾಗಬೇಕು. ಮೊಟ್ಟೆ ಬಿಸಾಡಿದ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಗೃಹ ಮಂತ್ರಿ ಮತ್ತು ಸಿಎಂ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದ್ದಾರೆ ಎಂದರು.

ಈ ಹಿಂದೆ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ ಮನೆಗೆ ನುಗ್ಗಿ ದಾಂದಲೆ ಮಾಡಿದ್ದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯಬೇಕೆಂಬುದು ನಮ್ಮ ಆಸೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರ ‘ಚಂಬಲ್ ಕಣಿವೆ’ ಹೇಳಿಕೆಗೆ ಪೂಜಾರಿ ಪ್ರತಿಕ್ರಿಯೆ ನೀಡಿ ಕೆಲವರು ಯಾವ ಶಬ್ಬ ಬಳಸುತ್ತಾರೋ ಗೊತ್ತಿಲ್ಲ. ಕುಮಾರಸ್ವಾಮಿ ವಿಧಾನಸೌಧಕ್ಕೆ ಚಂಬಲ್ ಕಣಿವೆ ಪದ ಬಳಸಿರೋದು ಅಗೌರವ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಟಾ ಪ್ರಥಮ ಬಾರೀಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಪರಾಧಿಗಳನ್ನ ಬಂಧಿಸುವ ಕೆಲಸವಾಗಿದೆ. ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ನೀಡುವ ಕೆಲಸ ಆಗುತ್ತೆ. ಹಿಂದಿನ ಸರ್ಕಾರ ಇದ್ದಾಗ 23 ಕೊಲೆಯಾಗಿತ್ತು. ಅಪರಾಧಿಗಳನ್ನ ಹಿಂದಿನ ಸರ್ಕಾರ ಬಿಟ್ಟಿತ್ತು. ಆರೋಪಿಗಳನ್ನ ಅಂದು ಒಳಗೆ ಹಾಕಿದಿದ್ದರೆ ಇವತ್ತು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.