ಕವಲೋಡಿ – ಕಣಕಲ್ಲೆ ರಸ್ತೆಯ ಅವೈಜ್ಞಾನಿಕ ಕಾಮಗಾರಿ.! ಮರು ಡಾಂಬರಿಕರಣ ಮಾಡಿದ ಕೆಲವೇ ತಿಂಗಳಲ್ಲಿ ಕಿತ್ತು ಹೋದ ರಸ್ತೆ.!

ಕುಮಟಾ: ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಕವಲೋಡಿ – ಕಣಕಲ್ಲೆ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಕೆಲವೇ ದಿನಗಳಲ್ಲಿ ಹಾಕಿದ ಡಾಂಬರು ಕಿತ್ತೆದ್ದಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಕವಲೋಡಿ – ಕಣಕಲ್ಲೆ ಮಾರ್ಗವಾಗಿ ಸಂತೇಗುಳಿ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸುಮಾರು 11 ಕಿ.ಮೀ ದೂರದ ರಸ್ತೆಗೆ ಸುಮಾರು ಕೆಲ ಮೀಟರ್ ರಸ್ತೆಯನ್ನು ಮರುಡಾಂಬರೀಕರಣ ಮಾಡಿದ್ದಾರೆ. ಡಾಂಬರ್ ಹಾಕಿದ 4 ತಿಂಗಳಿನೊಳಗಡಯೇ ಕಿತ್ತೆದ್ದು, ದೊಡ್ಡ ಮಟ್ಟದಲ್ಲಿ ಹೊಂಡ ಗುಂಡಿಗಳಾಗಿದೆ. ಕಳಪೆ ಕಾಮಗಾರಿ ಕೈಗೊಂಡಿರುವ ಪರಿಣಾಮ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಉಪ್ಪಿನಪಟ್ಟಣ, ಕವಲೋಡಿ, ಕಣಗಲ್ಲೆ ಸೇರಿದಂತೆ ಮತ್ತಿತರ ಊರುಗಳಲ್ಲಿ ಒಟ್ಟೂ 150 ಕ್ಕೂ ಅಧಿಕ ಮನೆಗಳಿದ್ದು, ಅಲ್ಲಿನ ಸಾರ್ವಜನಿಕರು ಈ ರಸ್ತೆಯ ಮೂಲಕ ತೆರಳಬೇಕಾಗಿದ್ದು, ರಸ್ತೆಯ ದುಸ್ಥಿತಿಯನ್ನು ಗಮನಿಸಿ, ಲೊಕೋಪಯೋಗಿ ಇಲಾಖೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ರಸ್ತೆ ಮಾಡಿರುವುದೇ 150 ಮೀಟರ್ ಮರುಡಾಂಬರೀಕರಣ ಅದರಲ್ಲಿಯೇ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣ ಪೋಲು ಮಾಡಿದ್ದಾರೆ. ಹೀಗಾಗಿ ಗುತ್ತಿಗೆದಾರನ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆನ್‌ಲೈನ್ ಮೂಲಕ ಹೊರ ತಾಲೂಕಿನ ಗುತ್ತಿಗೆದಾರರು ಕಡಿಮೆ ದರದಲ್ಲಿ ಟೆಂಡರ್ ಪಡೆದು ಕಳಪೆ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸುತ್ತಾರೆ. ಇದರಿಂದ ನಾಲ್ಕೈದು ತಿಂಗಳಿನಲ್ಲಿಯೇ ರಸ್ತೆಗಳು ಹಾಳಾಗುತ್ತದೆ. ಸ್ಥಳೀಯ ತಾಲೂಕಿನವರಿಗೆ ಆದ್ಯತೆ ನೀಡಿದರೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುತ್ತಾರೆ. ಈ ಬಗ್ಗೆ ಸರ್ಕಾರ ಹಾಗೂ ಇಲಾಖೆ ತಿದ್ದುಪಡಿ ಮಾಡಿದರೆ ಗುಣಮಟ್ಟದ ಕಾಮಗಾರಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಬಗ್ಗೆ ಲೊಕೋಪಯೋಗಿ ಇಲಾಖೆಯ ಅಭಿಯಂತರ ಸುದರ್ಶನ ಹೊನ್ನಾವರ ಅವರನ್ನು ಸಂಪರ್ಕಿಸಿ, ಮಾಹಿತಿ ಕೇಳಿದಾಗ, ಕಾಮಗಾರಿಯ ನಿರ್ವಹಣೆ ಹಣದಲ್ಲಿ ಬಹಳ ಹಾಳಾದ ಸ್ಥಳದಲ್ಲಿ ಮರುಡಾಂಬರೀಕರಣ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ರಸ್ತೆ ಹಾಳಾಗಿಲ್ಲ. ಮುಂದುವರೆದ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮರುಡಾಂಬರೀಕರಣ ಮಾಡಿದ್ದೇವೆ. ಮೆಟ್ಲಿಂಗ್ ಮಾಡಿ ಡಾಂಬರೀಕರಣ ಮಾಡಿಲ್ಲ. ಬಸ್ಸು ಸೇರಿದಂತೆ ಬೃಹತ್ ವಾಹನಗಳು ಸಂಚರಿಸಿದಾಗ ಮಳೆಗೆ ಕಿತ್ತು ಹೋಗಿದೆ. ಈ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.