ನಿಗದಿತ ಸಮಯದೊಳಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು: ಅಧಿಕಾರಿಗಳಿಗೆ ಡಿಸಿ ಮುಲ್ಲೈ ಮುಗಿಲನ್ ಸೂಚನೆ

ಕಾರವಾರ: ನಿಗದಿತ ಗುರಿಯನ್ನುಇಟ್ಟುಕೊಂಡು ಸರಿಯಾದ ಸಮಯದೊಳಗಡೆ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಇದರಿಂದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಿ.ಎಮ್.ಎಪ್.ಎಮ್.ಇ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಸಹಾಯಧನವನ್ನು ನೀಡಲಾಗುತ್ತಿದ್ದು ಸದಸ್ಯರುಗಳೊಂದಿಗೆ ಚರ್ಚಿಸಿ ಕೂಲಂಕುಶ ಅಧ್ಯಯನ ಮಾಡಿ ಸೆಪ್ಟಂಬರ್ ಅಂತ್ಯದೊಳಗಾಗಿ ನಿಗದಿ ತಗುರಿಯಂತೆ 600 ಫಲಾನುಭವಿಗಳಿಗೆ ಯೋಜನೆ ಲಾಭ ತಲುಪುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತವಾದ ಜಾಗವನ್ನು ನಿಗದಿಪಡಿಸಿ ತಿಂಗಳಾಂತ್ಯದೊಳಗೆ ಶುರುವಾಗಬೇಕು ಹಾಗೂ ವಸತಿ ಯೋಜನೆಯಲ್ಲಿ ಫಲಾನುಭವಿಯ ಮನೆಗಳಿಗೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ಮಾಡಬೇಕು ಮತ್ತು ಈಗಾಗಲೇ ಪೂರ್ಣಗೊಳ್ಳದ ಮನೆಗಳ, ಸಂಪೂರ್ಣವಾದ ಮನೆಗಳ ಹಾಗೂ ಪ್ರಗತಿಯಲ್ಲಿರುವ ಮನೆಗಳ ಸಂಖ್ಯೆಗಳ ಮಾಹಿತಿಯನ್ನು ಆ.25 ರೊಳಗಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಲಾಭ ಫಲಾನುಭವಿಗಳಿಗೆ ಇನ್ನು ತಲುಪಿಲ್ಲ ಇದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಕಾರಣ ನೀಡಬೇಕು ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಸ್ಟೀಲ್ಲಾ ವರ್ಗಿಸ್, ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಕಮ್ಟರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.