ಗೋಕರ್ಣ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಗುರುಕುಲ ಚಾತುರ್ಮಾಸ್ಯದಲ್ಲಿ ಶುಕ್ರವಾರ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗುರುಕುಲದ ಮಕ್ಕಳಿಗೆ ಬಾಳೆಗೊನೆ ಸ್ಪರ್ಧೆ, ಮೊಸರು ಗಡಿಗೆ ಒಡೆಯುವುದು, ರಸಪ್ರಶ್ನೆ, ರಾಧಾ ಕೃಷ್ಣ ವೇಷ, ಮೊಸರು ಕಡೆಯುವುದು, ಹಗ್ಗ ಜಗ್ಗಾಟ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಕುಲದ ವಿದ್ಯಾರ್ಥಿಗಳಿಂದ ಕೋಲಾಟ, ಸುಧೀರ್ ಹೆಗಡೆಯವರಿಂದ ಬಾನ್ಸುರಿ ವಾದನ ನಡೆದವು. ರಾತ್ರಿ ಧಾರ್ಮಿಕ ವಿಧಿವಿಧಾನಗಳು, ಶ್ರೀಕೃಷ್ಣನ ತೊಟ್ಟಿಲೋತ್ಸವ ಮತ್ತಿತರ ಕಾರ್ಯಕ್ರಮಗಳು ನಡೆದವು.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವ್ಯವಸ್ಥಾ ಪರಿಷತ್ ಅಧ್ಯಕ್ಷ ಡಿ.ಡಿ.ಶರ್ಮಾ, ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಪ್ರಾಚಾರ್ಯ ಮಹೇಶ್ ಹೆಗಡೆ, ಉಪ ಪ್ರಾಚಾರ್ಯರಾದ ಸೌಭಾಗ್ಯ, ವಿಶ್ವೇಶ್ವರ ಮತ್ತಿತರರು ಉಪಸ್ಥಿತರಿದ್ದರು.