ವೈಟ್ ಬೋರ್ಡ್ ವಾಹನದಲ್ಲಿ ನಿಯಮಮೀರಿ ಬಾಡಿಗೆ: ಮಂಕಿ ಟ್ಯಾಕ್ಸಿ ಚಾಲಕ, ಮಾಲಕ ಸಂಘದಿಂದ ಖಂಡನೆ

ಹೊನ್ನಾವರ: ತಾಲೂಕಿನ ಮಂಕಿ ಟ್ಯಾಕ್ಸಿ ಚಾಲಕ, ಮಾಲಕ ಸಂಘದವರಿಂದ ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನದಲ್ಲಿ ನಿಯಮಮೀರಿ ಬಾಡಿಗೆ ರೂಪದಲ್ಲಿ ಸಾರ್ವಜನಿಕರನ್ನು ಸಾಗಿಸುವುದನ್ನು ಖಂಡಿಸಿ ಹೊನ್ನಾವರದ ಆರ್.ಟಿ.ಓ, ಭಟ್ಕಳ ಗ್ರಾಮೀಣ ಪೊಲೀಸ್ ವೃತ್ತನಿರೀಕ್ಷಕರು ಹಾಗೂ ಮಂಕಿ ಪಿಎಸೈ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಶೀಘ್ರವಾಗಿ ಕಡಿವಾಣ ಹಾಕುವಂತೆ ವಿನಂತಿಸಿದರು.

ತಾಲೂಕಿನ ವಿವಿಧ ಭಾಗದ ಖಾಸಗಿ ವೈಟ್ ಬೋರ್ಡ್ ಹೊಂದಿರುವ ವಾಹನದವರು ಸರ್ಕಾರಕ್ಕೆ ಆದಾಯ ತಪ್ಪಿಸಿ ನಿಯಮ ಉಲ್ಲಂಘನೆ ಮಾಡಿ ಈ ರೀತಿ ಮಾಡುತ್ತಿದ್ದಾರೆ. ಇದುವರೆಗೂ ಸೂಕ್ತ ರೀತಿಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಗ್ರಾಮೀಣ ಹಾಗೂ ಪಟ್ಟಣದ ಆಟೋ ರಿಕ್ಷಾದವರು ಕೀ.ಮೀ ಮೀರಿ ಸಾಗುತ್ತಿದ್ದಾರೆ. ಕೊರೋನಾ ಆತಂಕದಿಂದ ಕಳೆದೆರಡು ವರ್ಷದಿಂದ ತೀವ್ರ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದು, ಇದೀಗ ಇಂಥವರಿಂದ ನಮ್ಮ ಹಳದಿ ಬೋರ್ಡ್ ವಾಹನವರಿಗೆ ನಷ್ಟ ಉಂಟಾಗುತ್ತಿದೆ. ಸ್ಥಳೀಯವಾಗಿರುವ ಆಟೋ ರೀಕ್ಷಾದವರು ತಮ್ಮ ಕೀ.ಮೀ ವ್ಯಾಪ್ತಿಯನ್ನು ಮೀರಿ ಬಾಡಿಗೆಗೆ ಹೋಗುವುದರಿಂದ ಇ.ವಿ.ಎಂ. ತುಂಬಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಯೂನಿಯನ್ ಅಧ್ಯಕ್ಷರಾದ ಶೇಖರ ಗೌಡ, ಕಾರ್ಯದರ್ಶಿ ಗಜಾನನ ಗೌಡ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಖಜಾಂಚಿ ಅನಿಲ ಹರಿಕಂತ್ರ ಹಾಗೂ ಸದಸ್ಯರು ಉಪಸ್ಥಿತರಿದ್ದರು.