ಬಲೆಗೆ ಸಿಲುಕಿ ಮಾಜಾಳಿ ಬೀಚ್‌ಗೆ ಬಂದ ‘ಹಾಕ್ಸ್ ಬಿಲ್’ ಕಡಲಾಮೆಯ ರಕ್ಷಣೆ

ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರರು ಕತ್ತರಿಸಿ ಬಿಟ್ಟಿದ್ದ ಬಲೆಗೆ ಅಪರೂಪದ ‘ಹಾಕ್ಸ್ ಬಿಲ್’ ಪ್ರಜಾತಿಯ ಕಡಲಾಮೆಯೊಂದು ಸಿಲುಕಿ ದಡಕ್ಕೆ ಬಂದ ಘಟನೆ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಗುರುವಾರ ನಡೆದಿದೆ. ಅರಣ್ಯಾಧಿಕಾರಿಗಳು ಕಡಲಾಮೆಯನ್ನು ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ.

ಹಾಕ್ಸ್ಬಿಲ್ (hawksbill) ಇದು ವಿಶೇಷ ಪ್ರಜಾತಿಯ ಕಡಲಾಮೆಯಾಗಿದ್ದು ಹವಳದ ದಿಬ್ಬ ಇರುವ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ. ಸ್ಥಳೀಯ ಮೀನುಗಾರರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಡಲಾಮೆಯನ್ನು ರಕ್ಷಿಸಿ ವಾಪಸ್ಸು ಸಮುದ್ರಕ್ಕೆ ಬಿಟ್ಟಿದ್ದಾರೆ.

ಕಳೆದ ವರ್ಷ ಇದೇ ಪ್ರಜಾತಿಯ ಕಡಲಾಮೆಯ ಮೃತದೇಹ ಇಲ್ಲಿನ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದೀಗ ಬಲೆಗೆ ಸಿಲುಕಿ ಇದೇ ಪ್ರಜಾತಿಯ ಕಡಲಾಮೆ ಮಾಜಾಳಿ ಕಡಲತೀರಕ್ಕೆ ಬಂದಿರುವುದು ಕಡಲ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಕಡಲ ವಿಜ್ಞಾನಿಗಳು ಹೇಳುವಂತೆ ಹಾಕ್ಸ್ಬಿಲ್ ಪ್ರಜಾತಿಯ ಕಡಲಾಮೆಗಳು ಹವಳದ ದಂಡೆ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಆದರೆ ಕಾರವಾರ ಭಾಗದ ಸಮುದ್ರ ತೀರಗಳಲ್ಲಿ ಇತ್ತೀಚೆಗೆ ಕಂಡು ಬಂದಿರುವುದನ್ನು ಗಮನಿಸಿದರೆ ಹತ್ತಿರದಲ್ಲೇ ಕಡಲಾಳದಲ್ಲಿ ಹವಳದ ದಿಬ್ಬಗಳ ಬೆಳೆದಿರುವ ಸಾಧ್ಯತೆ ಇದೆ. ಹೀಗಾಗಿ ಇದು ವಿಶೇಷವಾಗಿದ್ದು ಈ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ.

ಇನ್ನು ಬುಧವಾರವಷ್ಟೇ ಬಲೆಗೆ ಸಿಲುಕಿ ಎರಡು ಆಲಿವ್ ರಿಡ್ಲೆ ಪ್ರಜಾತಿಯ ಕಡಲಾಮೆಗಳು ದಂಡೆಬಾಗ ತೀರಕ್ಕೆ ಬಂದಿದ್ದವು. ಅವುಗಳಲ್ಲಿ ಒಂದನ್ನು ಸಮುದ್ರಕ್ಕೆ ಬಿಟ್ಟು ಅಸ್ವಸ್ಥಗೊಂಡಿದ್ದ ಇನ್ನೊಂದು ಆಮೆಯನ್ನು ಉಪಚಾರಕ್ಕಾಗಿ ಇರಿಸಿಕೊಳ್ಳಲಾಗಿತ್ತು. ಆ ಕಡಲಾಮೆಯು ಗುರುವಾರ ಚೇತರಿಸಿಕೊಂಡ ಕಾರಣ ಸಮುದ್ರಕ್ಕೆ ಬಿಡಲಾಗಿದೆ.

ಕಾರವಾರ ವಲಯದ ಡಿಸಿಎಫ್ ಪ್ರಶಾಂತ ಕೆ. ಸಿ. ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಪ್ರಮೋದ ನಾಯ್ಕ, ಕೋಸ್ಟಲ್ ಮರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಟ್ಟಿ, ಕಡಲ ವಿಜ್ಞಾನಿಗಳಾದ ಡಾ. ಮೇಘನಾ, ಡಾ. ತೇಜಸ್ವಿನಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಮರೈನ್ ವಿಭಾಗದ ಆರ್.ಎಫ್.ಓ. ಪ್ರಮೋದ ನಾಯ್ಕ ತಿಳಿಸಿದರು.