ಬಲೆಗೆ ಸಿಲುಕಿ ದಡಕ್ಕೆ ಬಂದ ‘ಆಲಿವ್ ರಿಡ್ಲೆ’ ಕಡಲಾಮೆಗಳ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಕತ್ತರಿಸಿ ಬಿಟ್ಟಿದ್ದ ಬಲೆಗೆ ಆಲಿವ್ ರಿಡ್ಲೆ ಪ್ರಜಾತಿಯ ಕಡಲಾಮೆಗಳೆರಡು ಸಿಲುಕಿ ಬಲೆಯ ಸಮೇತ ದಡಕ್ಕೆ ಬಂದ ಘಟನೆ ತಾಲೂಕಿನ ದೇವಬಾಗದ ಬಳಿಯ ದಂಡೆಬಾಗದ ಬಳಿ ಬುಧವಾರ ನಡೆದಿದ್ದು ಅರಣ್ಯಾಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಅವುಗಳನ್ನು ರಕ್ಷಿಸಿದ್ದಾರೆ.

ಸ್ಥಳೀಯ ಮೀನುಗಾರರಾದ ವಾಸು ಸೈಲ್ ಹಾಗೂ ಆನಂದ ಸೈಲ್ ಎನ್ನುವವರು ಬಲೆಯಲ್ಲಿ ಸಿಲುಕಿಕೊಂಡಿದ್ದ ಈ ಎರಡು ಕಡಲಾಮೆಗಳನ್ನು ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ ಅವರು ಸ್ಥಳೀಯ ಇತರ ಮೀನುಗಾರರ ನೆರವಿನೊಂದಿಗೆ ಆಮೆಗಳ ರಕ್ಷಣೆಗೆ ಮುಂದಾಗಿದ್ದಾರೆ.

ಯಾರೋ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಯ ವೇಳೆ ಬಲೆಯನ್ನು ಕತ್ತರಿಸಿ ಬಿಟ್ಟಿರುವ ಸಾದ್ಯತೆ ಇದ್ದು ಅವುಗಳಿಗೆ ಈ ಎರಡು ಆಲಿವ್ ರಿಡ್ಲೆ ಪ್ರಜಾತಿಯ ಕಡಲಾಮೆಗಳು ಸಿಲುಕಿವೆ. ಬಲೆಯಿಂದ ತಪ್ಪಿಸಿಕೊಳ್ಳಲಾಗದ ಕಾರಣ ಇವು ಬಲೆಯ ಸಮೇತ ಈಜಿಕೊಂಡು ದಡ ತಲುಪಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಬಲೆಯನ್ನು ಕತ್ತರಿಸಿ ಆಮೆಗಳನ್ನು ರಕ್ಷಿಸಿದ್ದಾರೆ. ಎರಡು ಆಮೆಗಳಲ್ಲಿ ಒಂದು ಆರೋಗ್ಯವಾಗಿದ್ದು ಅದನ್ನು ಅಲ್ಲಿಂದಲೇ ಸಮುದ್ರಕ್ಕೆ ಬಿಡಲಾಯಿತು. ಇನ್ನೊಂದು ಆಮೆ ತುಸು ಅಸ್ವಸ್ಥ ಸ್ಥಿತಿಯಲ್ಲಿದ್ದು ಅದನ್ನು ಆರೈಕೆಗಾಗಿ ಅಧಿಕಾರಿಗಳು ಇರಿಸಿಕೊಂಡಿದ್ದು ಗುಣವಾದ ಬಳಿಕ ಅದನ್ನು ಅದೇ ಸ್ಥಳದಲ್ಲಿ ಸಮುದ್ರಕ್ಕೆ ಬಿಡಲಾಗುವುದು ಎಂದು ಆರ್. ಎಫ್. ಓ. ಪ್ರಮೋದ ನಾಯ್ಕ ಮಾಹಿತಿ ನೀಡಿದ್ದಾರೆ.

ಡಿಸಿಎಫ್ ಪ್ರಶಾಂತ ಕೆ. ಸಿ. ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಪ್ರಮೋದ ನಾಯ್ಕ, ಕೋಸ್ಟಲ್ ಮರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಟ್ಟಿ ಸೇರಿದಂತೆ ಸಿಬ್ಬಂದಿಗಳು, ಸ್ಥಳೀಯ ಮೀನುಗಾರರು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.