ಕಾರವಾರ: ಭಾರತದ ಮಧ್ಯ ಪಶ್ವಿಮ ಘಟ್ಟ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಿಸರ್ಗ ತಜ್ಞರು ಪತ್ತೆಹಚ್ಚಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ತಂಡದವರು ಭಾರತದ ಮಧ್ಯ ಪಶ್ವಿಮ ಘಟ್ಟದಲ್ಲಿ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ‘ಘಟಿಯಾನ ದ್ವಿವರ್ಣ’
ವಿಜ್ಞಾನಿಗಳ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಇದುವರೆಗೂ 4000 ಜಾತಿಯ ಏಡಿಗಳಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 125 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಘಟಿಯಾನ ಪ್ರಭೇದದಲ್ಲಿ ಇಲ್ಲಿಯವರೆಗೆ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಗುರುತಿಸಲಾಗಿದ್ದು ‘ಘಟಿಯಾನ ದ್ವಿವರ್ಣ’ 14ನೇ ಸಿಹಿನೀರಿನ ಏಡಿಯಾಗಿದೆ.
75 ನೇ ಸ್ವಾತಂತ್ರ್ಯದ ಶುಭಸಂದರ್ಭದಲ್ಲಿ 75 ನೇ ಏಡಿ ಪತ್ತೆ
ವಿಶ್ವದಲ್ಲಿಯೇ ಜೀವವೈವಿಧ್ಯದ ಹಾಟ್ ಸ್ಪಾಟ್ ಎಂಬ ಖ್ಯಾತಿ ಹೊಂದಿರುವ ಭಾರತದ ಪಶ್ಚಿಮ ಘಟ್ಟಗಳಲ್ಲಿ ಇದುವರೆಗೆ ಒಟ್ಟು 75 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿತ್ತು. ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ 75ನೇ ಏಡಿ ಪತ್ತೆಹಚ್ಚಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಇಲಾಖೆ ಖುಷಿ ವ್ಯಕ್ತ ಪಡಿಸಿದೆ.
ಹೇಗಿದೆ ‘ಘಟಿಯಾನ ದ್ವಿವರ್ಣ’
ಘಟಿಯಾನ ಪ್ರಭೇದ ಏಡಿಗಳು ವಿಶೇಷವಾಗಿ ವರ್ಣಗಳಿಂದ ಕೂಡಿದ್ದು ಆಕರ್ಷಣೀಯವಾಗಿರುತ್ತವೆ. ಈಗ ಪತ್ತೆಯಾಗಿರುವ ಏಡಿಯ ದೇಹದ ವರ್ಣ ಬಿಳಿ ಮತ್ತು ಕಾಲುಗಳು ಚಾಕಲೇಟ್‌ವರ್ಣಗಳಿಂದ ಕೂಡಿರುವದರಿಂದ ‘ದ್ವಿವರ್ಣ’ ಎಂದು ನಾಮಕರಣ ಮಾಡಲಾಗಿದೆ ಎನ್ನುತ್ತಾರೆ ತಂಡದವರು.ಪಶ್ಚಿಮ ಘಟ್ಟದ ಬಂಡೆಗಳಲ್ಲಿನ ಅಡಿಯಲ್ಲಿರುವ ರಂದ್ರಗಳಲ್ಲಿ ಈ ಏಡಿಗಳು ವಾಸವಾಗಿರುತ್ತವೆ. ಇವು ಸಣ್ಣಪುಟ್ಟ ಹುಳುಗಳು ಮತ್ತು ಪಾಚಿಗಳನ್ನು ಆಹಾರವಾಗಿ ಸೇವಿಸುತ್ತವೆ.
ನಿಸರ್ಗ ತಜ್ಞರು ಹೇಳೋದೇನು.?
ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್. ನಾಯಕ ಅವರು ಈ ಬಗ್ಗೆ ತಮ್ಮ ವಿಚಾರವನ್ನು ಹಂಚಿಕೊಳ್ಳುತ್ತ ಆಹಾರ ಸರಪಳಿಯಲ್ಲಿ ಏಡಿಗಳು ಮಹತ್ವದ ಪಾತ್ರ ವಹಿಸುವದರ ಮೂಲಕ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತವೆ. ಆವಾಸ ಸ್ಥಾನ ನಾಶದಿಂದಾಗಿ ಹಲವಾರು ಪ್ರಭೇದದ ಜೀವಿಗಳು ವಿನಾಶದಂಚು ತಲುಪುತ್ತಿವೆ ಇವುಗಳ ಉಳಿವಿಗೆ ಪಶ್ಚಿಮಘಟ್ಟದ ಸಂರಕ್ಷಣೆ ಆಗಬೇಕು ಎನ್ನುತ್ತಾರೆ.
‘ಪಶ್ಚಿಮ ಘಟ್ಟ’ ವಿಶ್ವದ ಪ್ರಖ್ಯಾತ ಜೀವವೈವಿಧ್ಯ ತಾಣ
ಪಶ್ಚಿಮ ಘಟ್ಟವು ವಿಶಿಷ್ಟವಾದ ಅಸಂಖ್ಯಾತ ಜೀವರಾಶಿ ಹೊಂದುವುದರ ಮೂಲಕ ವಿಶ್ವದ ಪ್ರಖ್ಯಾತ ಜೀವವೈವಿಧ್ಯ ತಾಣವಾಗಿದ್ದು ಇನ್ನು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದು ಈ ಸಂಶೋಧನೆಯು ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದೆ ಎಂದು ಹೇಳಿಕೆಯಲ್ಲಿ ಸಂತಸ ವ್ಯಕ್ತಪಡಿಸಿದೆ.
ಇನ್ನು ಈ ಸಂಶೋಧನಾ ತಂಡದ ಸಾಧನೆಗೆ ಡಿ.ಸಿ.ಎಫ್. ಎಸ್. ಜಿ. ಹೆಗಡೆ, ಯಲ್ಲಾಪುರ ಎ.ಸಿ.ಎಫ್. ಹಿಮವತಿ ಭಟ್ಟ, ಕಾಳಿ ಟೈಗರ್ ರಿಸರ್ವ್ ನ ಡಿ.ಸಿ.ಎಫ್. ಮರಿಯಾ ಕ್ರಿಸ್ಟ್ ರಾಜು, ಅಣಶಿ ಎ.ಸಿ.ಎಫ್. ಶಿವಾನಂದ ತೊಡಕರ ಅವರು ಅಭಿನಂದಿಸಿದ್ದಾರೆ.