ಹಳಿಯಾಳ: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಪುರಸಭೆಯಿಂದ ಶಿವಾಜಿ ವೃತ್ತದಲ್ಲಿ ಅಳವಡಿಸಿರುವ ಲೋಗೊವೊಂದು ಭಾರಿ ವಿವಾದ ಸೃಷ್ಟಿಸಿತ್ತು. ಸದ್ಯ ತಾಲೂಕಿನಲ್ಲಿ ನಾಲ್ಕನೇ ದಿನವೂ ಬೂದಿ ಮುಚ್ಚಿದ ಕೆಂಡದ ವಾತಾವರಣ ಮುಂದುವರಿದಿದೆ.
ಪಟ್ಟಣದ ಪುರಸಭೆ, ಮಿನಿ ವಿಧಾನಸೌಧ ಹಾಗೂ ಪೊಲೀಸ್ ಠಾಣೆಯ ಎದುರಿನ ಶಿವಾಜಿ ವೃತ್ತದ ಸುಭಾಷ್ ಚಂದ್ರ ಭೋಸ್ ಪ್ರತಿಮೆ ಎದುರಿಗೆ ಕಟ್ಟೆ ಕಟ್ಟಿ ಇಂಡಿಯಾ ಎಂಬ ದೊಡ್ಡ ಅಕ್ಷರದಲ್ಲಿ ಬರೆದ ಲೋಗೊವನ್ನು ಪುರಸಭೆ ಪ್ರಕಟಿಸಿತ್ತು. ಇಂಡಿಯಾ ಅಕ್ಷರದ ಮೇಲೆ ಕೆಂಪುಕೋಟೆ, ಇಂಡಿಯಾ ಗೇಟ್, ಕುತುಬ್ ಮಿನಾರ್, ತಾಜಮಹಲ್ ಮತ್ತು ಕಮಲ್ ಮಹಲ್ ಸ್ಮಾರಕಗಳ ಚಿತ್ರವನ್ನು ಹಾಕಲಾಗಿತ್ತು.
ಇಲ್ಲಿ ಕೇವಲ ಮುಸ್ಲಿಂ ಸಮುದಾಯ ಬಿಂಬಿಸುವ ಸ್ಮಾರಕಗಳ ಲೋಗೊಗಳನ್ನು ಮಾತ್ರ ಬಳಸುವ ಮೂಲಕ ಹಿಂದೂ ಹಾಗೂ ಇತರ ಧರ್ಮದವರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆರೋಪವಾಗಿದೆ. ಭಾನುವಾರ ಬೆಳಿಗ್ಗೆ ಪುರಸಭೆ ಸಭಾಭವನದಲ್ಲಿ ಬಿಜೆಪಿ ಪುರಸಭಾ ಸದಸ್ಯರು ಸಭೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ತಹಶೀಲ್ದಾರ್ ಗೆ ತಿಳಿಸಲಾಗಿತ್ತು. ಭಾನುವಾರ ಸಾಯಂಕಾಲ ಮಾಜಿ ಶಾಸಕ ಸುನೀಲ್ ಹೆಗಡೆ ಸಮ್ಮುಖದಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿಜಿ ಶಿಂಧೆ ರಾತ್ರಿ 10 ಗಂಟೆಯ ಒಳಗೆ ಲೋಗೊ ತೆರವುಗೊಳಿಸುವುದಾಗಿ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರು.
ರಾತ್ರಿ 10.30 ಆದರೂ ತೆರವುಗೊಳಿಸದೆ ಇದ್ದಾಗ ಬಿಜೆಪಿ ಕಾರ‍್ಯಕರ್ತರು, ಪುರಸಭಾ ಸದಸ್ಯರು, ವಿವಿಧ ಹಿಂದೂ ಸಂಘಟನೆಯವರು ಪ್ರತಿಭಟನೆ ನಡೆಸಿ ತಾವೇ ಖುದ್ದಾಗಿ ತೆರವುಗೊಳಿಸಲು ಮುಂದಾದಾಗ ಪೋಲಿಸರು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರನ್ನು ಪೋಲಿಸರು ವಶಕ್ಕೆ ಪಡೆಯಲು ಮುಂದಾದಾಗ ಮಾಜಿ ಶಾಸಕ ಸುನೀಲ್ ಹೆಗಡೆ ಆಗಮಿಸಿ ಕಾರ‍್ಯಕರ್ತರನ್ನು ಬಂಧಿಸದಂತೆ ತಡೆದರು.
ಈ ಸಂದರ್ಭದಲ್ಲಿ ಮಾತನಾಡಿ, ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದಾರೆ. ಒಂದೇ ಕೊಮಿನ ಪರವಾಗಿ ಆಡಳಿತ ನಡೆಸುವುದಿದ್ದರೇ ಕುರ್ಚಿ ಬಿಟ್ಟು ಕೆಳಗಿಳಿಯಲಿ. ಈ ಘಟನೆಗೆ ಕಾರಣ ಅವರೇ ಆಗಿರುವುದರಿಂದ, ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿ ಪಿಜಿ ಶಿಂಧೆ ವಿರುದ್ದವು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಒಟ್ಟಾರೆ ಲೋಗೊವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಾಗಿರುವುದು ಸದ್ಯ ಭಾರೀ ಚರ್ಚೆಯ ವಿಷಯವಾಗಿದೆ. ಈ ಲೋಗೊಕ್ಕೆ ವಿರೋಧಿಗಳಿಂದ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಲು ಹಳಿಯಾಳ ಪೋಲಿಸರು ಒಂದು ಡಿಆರ್ ಪೊಲೀಸ್ ವ್ಯಾನ್ ಕಾವಲಿಗೆ ನಿಲ್ಲಿಸಿದ್ದಾರೆ.