ಲಿಂಗನಮಕ್ಕಿ ಜಲಾಶಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್.!

ಹೊನ್ನಾವರ: ಲಿಂಗನಮಕ್ಕಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭಾನುವಾರ ಭೇಟಿ ನೀಡಿ ನೀರಿನ ಮಟ್ಟ ಹಾಗೂ ಹೆಚ್ಚುವರಿ ನೀರು ಬಿಡುವ ಪೂರ್ವದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶದನ ನೀಡಿದರು.

ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನೀರಿನ ಮಟ್ಟ ದಿನೇದಿನೇ ಹೆಚ್ಚಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಭಾನುವಾರ ಜಲಾಶಯದ ನೀರಿನ ಮಟ್ಟ 1812.5 ಅಡಿ ತಲುಪಿದೆ. ಜಲಾಶಯದ ಒಳ ಹರಿವು ಸುಮಾರು 24,029 ಕ್ಯೂಸೆಕ್ಸ್‌ಗಿಂತಲೂ ಅಧಿಕವಾಗಿದೆ. ಇದೇ ರೀತಿ ಜಲಾಶಯಕ್ಕೆ ನೀರು ಹರಿದುಬಂದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಶನಿವಾರ ಪ್ರವಾಹದ ಮೂರನೇ ಹಾಗೂ ಅಂತಿಮ ಮುನ್ನೆಚ್ಚರಿಕೆ ನೀಡಿತ್ತು.

ಈ ಹಿನ್ನಲೆ ಜನರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಪಿಸಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನೀರನ್ನು ಒಮ್ಮೆಲೆ ಬಿಡುಗಡೆ ಮಾಡದೇ ಹಂತ ಹಂತವಾಗಿ ಬಿಡುವ ಬಗ್ಗೆ ಸಲಹೆ ಸೂಚನೆ ನೀಡಿದರು. ಶರಾವತಿ ನದಿ ಪಾತ್ರದ ಜನ ಜಾನುವಾರುಗಳಿಗೆ ಹಾನಿಯಾಗದ ರೀತಿಯಲ್ಲಿ ಕ್ರಮವಹಿಸಲು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಉಪಸ್ಥಿತರಿದ್ದರು.