ಶಿರಸಿ: ಬಾಳೆಕಾಯಿಯ ನೈಜ ದರ ಮರೆಮಾಚಿ ವ್ಯಾಪಾರಸ್ಥರು ರೈತರಿಂದ ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ಭಾನುವಾರ ನಡೆದಿದೆ.
ಪ್ರತಿ ಭಾನುವಾರ ಬೆಳಿಗ್ಗೆ ದಾಸನಕೊಪ್ಪದಲ್ಲಿ ಬಾಳೆಕಾಯಿ ಮಾರುಕಟ್ಟೆ ನಡೆಯುತ್ತದೆ. ಮಾರುಕಟ್ಟೆಯಲ್ಲಿ ನೂರಾರು ಕ್ವಿಂಟಲ್ ಬಾಳೆಕಾಯಿ ವ್ಯಾಪಾರವಾಗುತ್ತದೆ. ಆದರೆ ಇಂದು ರೈತರು ಬಾಳೆಕಾಯಿ ಹೆಚ್ಚಿಗೆ ತಂದಿರುವುದನ್ನು ಗಮನಿಸಿದ ವ್ಯಾಪಾರಸ್ಥರು ಮಾತಾಡಿಕೊಂಡು ದರವನ್ನು ಅರ್ಧಕ್ಕಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಪ್ರತಿ ಕೆ ಜಿ ಗೆ 50 ರೂ. ದರವಿದ್ದರೂ ವ್ಯಾಪಾರಸ್ಥರು 20-25 ರೂ.ನಲ್ಲಿ ಖರೀದಿಸಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ರೈತರು ಕೆಲಕಾಲ ಬಾಳೆಕಾಯಿ ಹೇರಿಕೊಂಡು ಬಂದ ವಾಹನವನ್ನು ಅಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿ ನೂರಾರು ವಾಹನಗಳು ಸಿರ್ಸಿ- ಹಾವೇರಿ, ಮಳಗಿ, ಬನವಾಸಿ ಹೆದ್ದಾರಿಯಲ್ಲಿ ನಿಂತಿದ್ದವು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಕಿರವತ್ತಿ ಬದನಗೊಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ಆಲೂರ್, ಸದಸ್ಯ ನಟರಾಜ್ ದನ್ನಳ್ಳಿ ಕುಮಾರ್ ಮಾಳಕ್ಕನವರ್, ಎಪಿಎಂಸಿ ಸದಸ್ಯರಾದ ಧನಂಜಯ್ ಸಾಕೆನ್ನನವರ್ ಮುಂತಾದವರು ಆಗಮಿಸಿ ರೈತರ ಸಮಾಧಾನ ಪಡಿಸಿ ವ್ಯಾಪಾರಸ್ಥರು ಹಾಗೂ ರೈತರು ಸೇರಿ ಸ್ಥಳದಲ್ಲೇ ಸಭೆ ನಡೆಸಿ ದರ ನಿಗದಿ ಮಾಡಿ ಖರೀದಿ ಮಾಡಬೇಕೆಂದು ವ್ಯಾಪಾರಸ್ಥರಿಗೆ ಎಚ್ಚರಿಸಿದರು.
ಈ ವೇಳೆ ಮಾತನಾಡಿದ ರಾಘವೇಂದ್ರ ನಾಯ್ಕ್ ಕಿರವತ್ತಿ, ರೈತ ಶ್ರಮಪಟ್ಟು ಬೆಳೆದಿರುತ್ತಾನೆ, ಬೆಳೆದ ಬೆಳೆಗೆ ಮಾರುಕಟ್ಟೆ ಬೆಲೆ ಏನಿದಿಯೋ ಅದರ ದರ ಹಾಕಿ ಕೊಡಬೇಕು. ರೈತರೊಂದಿಗೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಎಪಿಎಂಸಿ ಅಧ್ಯಕ್ಷ ಪ್ರಶಾಂತ್ ಗೌಡ ಪರಿಶೀಲನೆ ನಡೆಸಿದರು.