ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಗೇರುಸೊಪ್ಪದ ಬಂಗಾರ ಕುಸುಮ ಫಾಲ್ಸ್.!

ಹೊನ್ನಾವರ: ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಜಲಪಾತಗಳಿಗೆ ಮತ್ತೆ ಜೀವ ಕಳೆ ಬಂದಿದೆ.

ಹೌದು.! ತಾಲೂಕಿನ ಗೇರುಸೊಪ್ಪ-ಜೋಗ ಹೆದ್ದಾರಿಯ ಶರಾವತಿ ಅಭಯಾರಣ್ಯ ಭಾಗದಲ್ಲಿ ಇರುವ ಬಂಗಾರ ಕುಸುಮ ಜಲಪಾತ ಭೋರ್ಗರೆಯುತ್ತ ಹಾಲ್ನೊರೆಯಂತೆ ಮೈದುಂಬಿ ಹರಿಯುತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸೌಂದರ್ಯ ಸವಿಯಲು ಬರುವ ಸಾವಿರಾರು ಪ್ರವಾಸಿಗಳು.!

ದಟ್ಟ ಕಾನನದ ಮಧ್ಯೆ ಗುಡ್ಡದ ತುದಿಯಿಂದ ದುಮ್ಮಿಕ್ಕುವ ಈ ಜಲಪಾತ ಹಾಲ್ನೊರೆಯಂತೆ ಶುಭ್ರ ನೀರಿನಿಂದ ಹರಿಯುತಿದ್ದು, ಪ್ರಕೃತಿಪ್ರಿಯರನ್ನು ಸೆಳೆಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಇದರ ರಮಣೀಯ ಸೌಂದರ್ಯವನ್ನು ಸವಿದು ಮುಂದೆ ಸಾಗುತ್ತಾರೆ. ವಾರದ ಕೊನೆ ಮತ್ತು ರಜಾದಿನಗಳಲ್ಲಂತೂ ಬೇರೆ ಬೇರೆ ಊರುಗಳಿಂದ ಸಾವಿರಾರು ಜನರು ಜಲಪಾತ ನೋಡಲು ಆಗಮಿಸುತ್ತಾರೆ.

ಈ ಜಲಪಾತವು 3 ಹಂತದಲ್ಲಿ ದುಮ್ಮಿಕ್ಕುತ್ತದೆ. ಮೊದಲ ಮತ್ತು ಎರಡನೇ ಹಂತಕ್ಕೆ ಹೋಗಲು ದಾರಿಯಿದ್ದು, ಮೂರನೇ ಹಂತಕ್ಕೆ ಹೋಗಲು ಸರಿಯಾದ ದಾರಿಯಿಲ್ಲ. 3 ನೇ ಹಂತಕ್ಕೆ ಟ್ರೆಕ್ಕಿಂಗ್ ಪ್ರೀಯರು ಮಾತ್ರ ಹರಸಾಹಸ ಪಟ್ಟು ಹೋಗುತ್ತಾರೆ.

ಜಲಪಾತಕ್ಕೆ ಬೇಕಿದೆ ಅಭಿವೃದ್ಧಿಯ ಕಾಯಕಲ್ಪ.!

ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಇರುವ ಈ ಜಲಪಾತ ಗೇರುಸೊಪ್ಪದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ರಸ್ತೆಯ ಪಕ್ಕದಿಂದ ಒಂದು ಕಿಲೋಮೀಟರ್ ಕಾಡಿನಲ್ಲಿ ನಡೆದು ಹೋದರೆ ಭೋರ್ಗರೆಯುವ ಜಲಪಾತ ಸಿಗುತ್ತದೆ.

ಪ್ರವಾಸಿಗರಿಗೆ ತೆರಳಲು ಚಿಕ್ಕ ಕಾಲು ಹಾದಿ ಮಾತ್ರ ಇದೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಜಲಪಾತಕ್ಕೆ ಪ್ರವಾಸಿಗರಿಗೆ ಬೇಕಾದ ಮೂಲ ಸೌಕರ್ಯದ ಕೊರತೆಯಿದೆ. ವಾಹನ ನಿಲ್ಲಿಸಲು ಸ್ಥಳಾವಕಾಶ ಇಲ್ಲದ್ದರಿಂದ ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಹೋಗಬೇಕಾಗಿರುವುದು ಪ್ರವಾಸಿಗರಿಗೆ ಅನಿವಾರ್ಯವಾಗಿದೆ. ಇದರಿಂದ ಈ ಮಾರ್ಗದಲ್ಲಿ ಸಾಗುವ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸರಿಯಾದ ಮೂಲಸೌಕರ್ಯ ಒದಗಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ಇನ್ನೂ ಹೆಚ್ಚಿನ ಪ್ರವಾಸಿಗರು ಜಲಪಾತಕ್ಕೆ ಆಗಮಿಸುತ್ತಾರೆ. ಅರಣ್ಯ ಇಲಾಖೆಯವರು ಇನ್ನು ಮೇಲಾದರೂ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಿ ಜಲಪಾತ ನೋಡಲು ಬರುವವರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.