ಭಟ್ಕಳ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಉಳಿಸಿ, ಬೆಳೆಸಿಕೊಳ್ಳುವುದರಲ್ಲಿ ಪ್ರಯತ್ನಿಸಬೇಕು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ನಗರದ ನಾಮಧಾರಿ ಸಭಾಭವನದಲ್ಲಿ ನಡೆದ ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯವಾಗಿದೆ. ಅದರಲ್ಲೂ ನನ್ನ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ವಿಚಾರ. ವಿದ್ಯಾರ್ಥಿಗಳನ್ನು ಸಮಾಜವು ಗುರುತಿಸುವಂತಹ ಉತ್ತಮ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಸಹ ಸಮಾಜದ ಗುರುತಿಸುವಿಕೆಯ ಕಾರ್ಯಕ್ಕೆ ಚಿರರುಣಿಯಾಗಿರಬೇಕಾಗಿದೆ. ಸಮಾಜವು ನೀಡಿದಂತಹ ಪುರಸ್ಕಾರಗಳನ್ನು ವಿದ್ಯಾರ್ಥಿಗಳೂ ಪಡೆದು ಉತ್ತಮ ಶಿಕ್ಷಣ ಪಡೆದು ಸಮಾಜವನ್ನು ನೆನಪಿಸಿಕೊಳ್ಳಬೇಕು. ಗುರುತಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಇಂದಿನ ವಿದ್ಯಾರ್ಥಿಗಳು ನಮ್ಮ ಧರ್ಮ, ನಮ್ಮ ಸಂಸ್ಕೃತಿಯನ್ನು ಯಾವತ್ತೂ ಮರೆಯಬಾರದು. ಶಿಕ್ಷಣಕ್ಕೆ ಸರಕಾರ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದು ಸಮಾಜದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣಕ್ಕೆ ನನ್ನ ಸಹಾಯ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಪಶ್ವಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭಾಪುರಸ್ಕಾರವನ್ನು ದೇಶದ ಅಮೃತಮಹೋತ್ಸವದ ಸಂದರ್ಭದಲ್ಲಿ ಪಡೆಯುತ್ತಿರುವುದು ನಿಜಕ್ಕೂ ಪುಣ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮಾಡಲು ಗುರಿ ಹೊಂದಬೇಕು. ಯಾವುದೇ ದೊಡ್ಡ ಹುದ್ದೆಗೆ ಹೋದರೂ ಬೆಳೆಸಿದ ತಂದೆ ತಾಯಿ ಹಾಗೂ ಸಮಾಜಕ್ಕೆ ಯಾವತ್ತೂ ಋಣಿಯಾಗಿರುವುದು ತಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ದೇವಸ್ಥಾನದ ಮುಖ್ಯ ದ್ವಾರವನ್ನು ತನ್ನ ಸ್ವಂತ ಖರ್ಚಿನಿಂದ ಕಟ್ಟಿಸುತ್ತಿರುವ ಶಾಸಕ ಸುನೀಲ್ ನಾಯ್ಕರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿ ಸಮಾಜದ ವಿದ್ಯಾರ್ಥಿಗಳನ್ನು, ಹೊಸದಾಗಿ ಸರಕಾರಿ ಕೆಲಸಕ್ಕೆ ನೇಮಕಗೊಂಡವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ 625 ಅಂಕಗಳಿಗೆ 625 ಅಂಕ ಪಡೆದ ಮೂಡಭಟ್ಕಳದ ಬಿರ್ಸುಮನೆಯ ನಾಗೇಶ ನಾಯ್ಕ ದಂಪತಿಗಳ ಪುತ್ರಿಯಾದ ಅಕ್ಷತಾ ನಾಗೇಶ ನಾಯ್ಕ ಹಾಗೂ ಪಾಲಕರನ್ನು ಸಮಾಜದ ಪರಮಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ 198 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.