ನಮ್ಮ ಕಾರವಾರ ಉದ್ಯಾನವನದಲ್ಲಿ ದೇಶವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ

ಕಾರವಾರ: ಭಾರತ ಸರ್ಕಾರ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾಡಳಿತ ಭವನ ಹತ್ತಿರದ ನಮ್ಮ ಕಾರವಾರ ಉದ್ಯಾನವನದಲ್ಲಿ ಆಯೋಜಿಸಿರುವ ದೇಶ ವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿ, ಛಾಯಾಚಿತ್ರಗಳನ್ನು ವೀಕ್ಷಿಸಿದರು.

ಭಾರತದ ವಿಭಜನೆಯು ಮನುಕುಲದ ಇತಿಹಾಸದಲ್ಲಿಯೇ ಎಂದೂ ಕೇಳರಿಯದ ಕಥೆಯಾಗಿದೆ. ಲಕ್ಷಾಂತರ ಜನ ಅಪರಿಚಿತ ಜಾಗದಲ್ಲಿ ತಮ್ಮ ಜೀವನಕಟ್ಟಿಕೊಳ್ಳಲು, ಹೊಸ ಬದುಕು ಅರಸಿ ಹೊರಟ ಘಟನೆಗಳನ್ನು ಈ ಪ್ರದರ್ಶನ ನೆನಪಿಸುತ್ತದೆ ಎಂದು ಹೇಳಿದರು.

ನೂರಾರು ಸಾರ್ವಜನಿಕರು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿದರು. ಆ. 15 ರವರೆಗೆ ಛಾಯಾಚಿತ್ರಗಳ ಪ್ರದರ್ಶನ ಮುಂದುವರೆಯಲಿದೆ.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ, ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ತಹಶೀಲ್ದಾರ ನೊರೋನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಪ್ರತೀಕ್ ಶೆಟ್ಟಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.