ನಾಟಿ ಮಾಡಿದ ಗದ್ದೆಗಳು ಜಲಾವೃತ

ಸಿದ್ದಾಪುರ: ಕಳೆದೊಂದು ವಾರದಿಂದ ಆರ್ಭಟಿಸುತ್ತಿರುವ ಆಶ್ಲೇಷಾ ಮಳೆಯಿಂದ ತಾಲೂಕಿನಲ್ಲಿ ನಾಟಿ ಹಾಗೂ ಬಿತ್ತನೆ ಮಾಡಿರುವ ಗದ್ದೆಗಳು ಜಲಾವೃತಗೊಂಡು ಪುನಃ ನಾಟಿ ಮಾಡುವ ಸ್ಥಿತಿ ಎದುರಾಗಿದೆ.

ಮಳೆಯ ಅಬ್ಬರಕ್ಕೆ ತಾಲೂಕಿನ ಬಹುತೇಕ ಕೃಷಿ ಭೂಮಿ ಜಲಾವೃತಗೊಂಡಿದೆ. ಜುಲೈ ಅಂತ್ಯ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ನಾಟಿ ಮಾಡಿರುವ ಭತ್ತದ ಸಸಿಗಳು ಮಳೆ ನೀರಿನೊಂದಿಗೆ ಬೆರೆತು ಸಂಪೂರ್ಣ ಹಾನಿಯಾಗಿದೆ. ಕೂಲಿಯಾಳುಗಳ ಕೊರತೆ, ದುಭಾರಿ ನಿರ್ವಹಣೆ ವೆಚ್ಚದಿಂದ ಭತ್ತದ ಕೃಷಿಯ ಸಹವಾಸವೇ ಸಾಕೆಂದು ನಿರಾಸರಾಗಿರುವ ರೈತಾಪಿ ಸಮುದಾಯಕ್ಕೆ ಆಶ್ಲೇಷ ಮಳೆ ಭಾರಿ ಹೊಡೆತ ನೀಡಿದೆ.

ಮುಳುಗಡೆ ಪ್ರದೇಶವೆಂದೇ ಖ್ಯಾತಿಯಾದ ಅಕ್ಕುಂಜಿ, ಕಲ್ಯಾಣಪುರ, ನೆಜ್ಜೂರ, ಅರೆಂದೂರಿನ ಕೃಷಿಕರು ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹದ ಹೊಡೆತಕ್ಕೆ ನಲುಗುತ್ತಿದ್ದಾರೆ. ಈ ಭಾಗದಲ್ಲಿ ತಿಂಗಳುಗಟ್ಟಲೆ ಕೃಷಿ ಭೂಮಿ ಮುಳುಗಡೆಯಾಗುತ್ತಿದ್ದು, ರೈತರು ಪರದಾಡುವಂತೆ ಮಾಡಿದೆ. ಸದ್ಯ ನಾಟಿ, ಬಿತ್ತನೆ ಮಾಡಿದ 20 ಎಕರೆಗೂ ಅಧಿಕ ಜಮೀನಿನಲ್ಲಿ ನೀರುನಿಂತು ಬೆಳೆ ಸಂಪೂರ್ಣ ನಾಶವಾಗಿದೆ. ಇಲ್ಲಿನ ರೈತರಿಗೆ ನೆರೆ ಇಳಿದ ಮೇಲೆ ಪುನಃ ನಾಟಿ ಮಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ.‌ ಪುನಃ ನಾಟಿ ಮಾಡಿದ ಮೇಲೆ ಮತ್ತೆ ಮಳೆ ಅಬ್ಬರಿಸಿದರೆ ಹೊತ್ತಿನ ಊಟಕ್ಕೂ ಬರೆ ಬೀಳಲಿದೆ.‌

ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯ ಅಂದಾಜಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.