ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ಸುರಕ್ಷಿತವಾಗಿ ತೆರವು

ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಸರ್ಕಲ್ ಬಳಿ ಬುಧವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿದ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದನ್ನು ತೆರವುಗೊಳಿಸಿದ್ದಾರೆ.

ಈ ವೇಳೆ ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಿದರು.
ಜಿಲ್ಲೆಯಲ್ಲಿ ಸರ್ಕಾರವೇ ನಿಯುಕ್ತಿ ಮಾಡಿದ ಕ್ವಿಕ್ ರಿಯಾಕ್ಷನ್ ಟೀಮ್ ಅಂಕೋಲಾದಿಂದ ಹಾಗೂ ಮಂಗಳೂರಿನ ಟ್ಯಾಂಕರ್ ಗುತ್ತಿಗೆ ಕಂಪನಿಯ ಯಂತ್ರಗಳು, ಹೆದ್ದಾರಿ ಗುತ್ತಿಗೆ ಐಆರ್‍ಬಿ ಕಂಪನಿಯ ಜೆಸಿಬಿಗಳು ಸ್ಥಳಕ್ಕೆ ಆಗಮಿಸಿ ಟ್ಯಾಂಕರನ್ನು ಎತ್ತಿ ಟ್ರಾಲರ್ ಮೇಲೆ ಕೂರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜನಾಥ ಸಾಲೆ ಹಾಗೂ ಕ್ವಿಕ್ ರಿಯಾಕ್ಷನ್ ಟೀಮ್ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮ ವಹಿಸಿ ಟ್ಯಾಂಕರ್ ವಾಹನವನ್ನು ಸ್ಥಳಾಂತರಿಸಿದರು. ಐಆರ್‍ಬಿ ಹೆದ್ದಾರಿ ಗುತ್ತಿಗೆ ಕಂಪನಿ ಸಿಬ್ಬಂದಿಗಳು ಗೇರಸೊಪ್ಪಾ ವೃತ್ತದ ಬಳಿ ರಾಶಿ ಸುರಿದಿಟ್ಟ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿ ಪ್ರತ್ಯೇಕ ತರ್ತು ವಾಹನ ಸಂಚಾರಕ್ಕೆ ರಸ್ತೆಯನ್ನು ಸಿದ್ಧಗೊಳಿಸಿದರು.

ಮಂಗಳೂರಿನಿಂದ ಬರುವ ವಾಹನಗಳನ್ನು ಬೈಂದೂರ ಭಟ್ಕಳ, ಮಂಕಿ, ಕಾಸರಕೋಡ ಭಾಗದಲ್ಲಿ ಗೋವಾದಿಂದ ಬರುವ ವಾಹನಗಳನ್ನು ಕಾರವಾರ, ಅಂಕೋಲಾ, ಕುಮಟಾ ಭಾಗಗಳಲ್ಲಿ ನಿಲುಗಡೆ ಮಾಡಿದ್ದರಿಂದ ಹೆದ್ದಾರಿ ವಾಹನ ಸಂಚಾರವನ್ನು ಯಶಸ್ವಿಯಾಗಿ ನಿಯಂತ್ರಿಸಲಾಯಿತು. ಹೊನ್ನಾವರ ಪೋಲಿಸರು ಗ್ಯಾಸ್ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪದೇ ಪದೇ ಅಪಘಾತಕ್ಕೀಡಾಗುತ್ತಿದೆ ಗ್ಯಾಸ್ ಟ್ಯಾಂಕರ್

ಗೇರಸೊಪ್ಪಾ ವೃತ್ತದ ಬಳಿ ಕಳೆದ 2 ವರ್ಷಗಳಲ್ಲಿ ತುಂಬಿದ ಟ್ಯಾಂಕರ್ ಬಿದ್ದ ಪ್ರಕರಣ ಇದು 4 ನೇಯದಾಗಿದೆ. ಅವೈಜ್ಞಾನಿಕ ತಿರುವಿನಿಂದ ಕೂಡಿದ ವೃತ್ತವನ್ನು ಸರಿಪಡಿಸದೇ ಇದ್ದರಿಂದ ನಿತ್ಯವೂ ಇಲ್ಲಿ ಅಪಘಾತ ಸಾಮಾನ್ಯವಾಗಿದೆ. ಅವೈಜ್ಞಾನಿಕ ಅಪಾಯಕಾರಿ ತಿರುವನ್ನು ಸರಿಪಡಿಸುವಂತೆ ಹಲವು ವರ್ಷಗಳಿಂದ ಜನ ಒತ್ತಾಯಿಸುತ್ತಾ ಇದ್ದಾರೆ.

ಅಪಾಯಕಾರಿ ತಿರುವಿನಲ್ಲಿ ವಾಹನ ದಟ್ಟಣೆ ತಪ್ಪಿಸಲು ಜನರ ಸುರಕ್ಷೆಗಾಗಿ ಮೇಲ್ಸೇತುವೆಗಾಗಿ ಕಳೆದ 5 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇನ್ನು ಜನರ ಸಹನೆಯ ಪರೀಕ್ಷೆ ಸರಿ ಅಲ್ಲ. ಜನಪ್ರತಿನಿಧಿಗಳು ಇತ್ತ ಕಡೆ ಇನ್ನಾದರೂ ಗಮನ ಹರಿಸಬೇಕು. ಸಾವು ಸಂಭವಿಸುವ ಮೊದಲು ಮೇಲ್ಸೇತುವೆ ರಚಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು. ಸಾವು ನೋವು ಸಂಭವಿಸಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಹೊನ್ನಾವರ ಹೆದ್ದಾರಿ ಮೇಲ್ಸೇತುವೆ ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.