ನವದೆಹಲಿ, ಜೂನ್ 13: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಚುನಾವಣೆ ಕಾರಣಕ್ಕೆ ಫೆಬ್ರುವರಿ 1ರಂದು ಪೂರ್ಣಪ್ರಮಾಣದ ಬಜೆಟ್ ಬದಲು ಮಧ್ಯಂತರ ಬಜೆಟ್ ಮಂಡನೆ ಆಗಿತ್ತು. ಈಗ 2024-25ರ ಹಣಕಾಸು ವರ್ಷಕ್ಕೆ ಹೊಸ ಸರ್ಕಾರದಿಂದ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಸಚಿವರಾಗಿ ಮುಂದುವರಿದಿದ್ದು, ಅವರಿಂದಲೇ ಬಜೆಟ್ ಮಂಡನೆ ಆಗಲಿದೆ. ಆದರೆ, ಜುಲೈನಲ್ಲಿ ಬಜೆಟ್ ಮಂಡಿಸಲಿರುವುದು ಖಚಿತವಾಗಿದ್ದರೂ ಯಾವ ದಿನ ಎಂದು ಇನ್ನೂ ನಿರ್ದಿಷ್ಟವಾಗಿಲ್ಲ. ಎಎನ್ಐ ಸುದ್ದಿಸಂಸ್ಥೆ ವರದಿ ಪ್ರಕಾರ ಜುಲೈ ಮೂರನೇ ವಾರದಲ್ಲಿ ಸಂಸತ್ನಲ್ಲಿ ಬಜೆಟ್ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಜುಲೈ 15ರಿಂದ 21ರ ವಾರದಲ್ಲಿ ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಆಗಬಹುದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆ ಆದ ಬಳಿಕ ಜುಲೈ ಮೊದಲ ಅಥವಾ ಎರಡನೇ ವಾರದೊಳಗೆ ಬಜೆಟ್ ಇರುತ್ತದೆ.
ಈ ಬಾರಿ ಸಾರ್ವತ್ರಿಕ ಚುನಾವಣೆ ನಡೆದದ್ದು 18ನೇ ಲೋಕಸಭೆಗೆ. ಜೂನ್ 24ಕ್ಕೆ ಹೊಸ ಲೋಕಸಭೆಯ ಮೊದಲ ಸೆಷನ್ ಆರಂಭವಾಗಲಿದೆ. ನೂತನ ಲೋಕಸಭಾ ಸದಸ್ಯರೆಲ್ಲರೂ ಈ ವೇಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯುತ್ತದೆ. ಮೂರು ದಿನ ಕಾಲ ಈ ಪ್ರಕ್ರಿಯೆ ನಡೆಯುತ್ತದೆ.
ಜೂನ್ 27ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆ ಮತ್ತು ಲೋಕಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 3ರವರೆಗೂ ಈ ಅಧಿವೇಶನ ಮುಂದುವರಿಯಲಿದೆ.
ಇದಾದ ಬಳಿಕ ಜುಲೈ ಮೂರನೇ ವಾರದಲ್ಲಿ ಎರಡೂ ಸದನಗಳು ಸೇರಲಿದ್ದು, ಆಗ ಬಜೆಟ್ ಮಂಡನೆ ಆಗಲಿದೆ.
ಹೊಸ ದಾಖಲೆ ಬರೆಯಲಿರುವ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ 2019ರಿಂದಲೂ ಹಣಕಾಸು ಸಚಿವೆಯಾಗಿದ್ದಾರೆ. ಒಟ್ಟು ಆರು ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಐದು ಪೂರ್ಣ ಪ್ರಮಾಣದ ಬಜೆಟ್, ಮತ್ತು ಒಂದು ಮಧ್ಯಂತರ ಬಜೆಟ್ ಸೇರಿದೆ. ಈ ಬಾರಿ ಮಂಡಿಸಿದರೆ ಸತತ ಏಳನೇ ಬಜೆಟ್ ಆಗುತ್ತದೆ. ಸತತ ಆರನೇ ಪೂರ್ಣಪ್ರಮಾಣ ಬಜೆಟ್ ಮಂಡನೆ ಮಾಡಿದಂತಾಗುತ್ತದೆ. ಸತತವಾಗಿ ಇಷ್ಟು ಸಂಖ್ಯೆಯಲ್ಲಿ ಹಿಂದೆ ಬೇರಾವ ಹಣಕಾಸು ಸಚಿವರು ಬಜೆಟ್ ಮಂಡಿಸಿದ್ದಿಲ್ಲ. ಮೊರಾರ್ಜಿ ದೇಸಾಯಿ ಆರು ಬಾರಿ ಬಜೆಟ್ ಮಂಡನೆ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಈಗ ನಿರ್ಮಲಾ ಸೀತಾರಾಮನ್ ಈ ದಾಖಲೆ ಮುರಿಯಲಿದ್ದಾರೆ.