ದುಬೈ, (ಡಿಸೆಂಬರ್ 02): ನೀವು ಯಾರು, ನೀವು ಏನು ನಂಬುತ್ತೀರಿ, ನೀವು ಸ್ವರ್ಗಕ್ಕೆ ಹೋಗುತ್ತೀರಾ ಅಥವಾ ನರಕಕ್ಕೆ ಹೋಗುತ್ತೀರಾ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು. ನಾವು ತಿನ್ನುವ ಆಹಾರ ಒಂದೇ ಮಣ್ಣಿನಿಂದ ಬರುತ್ತದೆ. ಕೊನೆಗೆ ನಾವು ಸಾಯುವಾಗ ಅದೇ ಮಣ್ಣಿನಲ್ಲಿ ಭೇಟಿಯಾಗುತ್ತೇವೆ. ಮಣ್ಣು ಎನ್ನುವುದು ಅಂತಿಮ ಏಕೀಕರಣ ಎಂದು ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮಣ್ಣಿನ ಮಹತ್ವದ ಬಗ್ಗೆ ಹೇಳಿದರು.
ಹವಾಮಾನ ಬದಲಾವಣೆ ಕುರಿತು ದುಬೈನಲ್ಲಿ ಆಯೋಜಿಸಲಾಗಿರುವ ಕಾನ್ಫರೆನ್ಸ್ ಆಫ್ ಪಾರ್ಟಿಸ್ 28ನೇ ಸಮ್ಮೇಳದಲ್ಲಿ ಮಾತನಾಡಿದ ಸದ್ಗುರು, ಈ ಗ್ರಹದಲ್ಲಿ ಮಣ್ಣು ಅಕ್ಷರಶಃ ಜೀವವೈವಿಧ್ಯದ ತಾಯಿಯಾಗಿದೆ. ಸಮೃದ್ಧ ಮಣ್ಣಿನಿಲ್ಲದೆ, ಜೀವವೈವಿಧ್ಯಕ್ಕೆ ಅವಕಾಶವಿಲ್ಲ. ಈ ಗ್ರಹದಲ್ಲಿ ಜೀವಕ್ಕೆ ಜನ್ಮ ನೀಡುವ ಗರ್ಭವೇ ಮಣ್ಣು. ಮಣ್ಣಿನ ಪುನರುಜ್ಜೀವನ ನೀತಿಗಳನ್ನು ಜಾರಿಗೆ ತರಲು ಜನರನ್ನು ಪ್ರಭಾವಿಸಲು ನಾಯಕರು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ತಿಳಿಸಿದರು.
ಮಣ್ಣಿನ ಪುನರುಜ್ಜೀವನ ನೀತಿಗಳನ್ನು ಜಾರಿಗೆ ತರಲು ಜನರನ್ನು ಪ್ರೇರೇಪಣೆ ಮಾಡುವುದರಲ್ಲಿ ನಾಯಕರ ಪ್ರಮುಖ ಪಾತ್ರ ವಹಿಸುತ್ತದೆ. ನಂಬಿಕೆಯ ಹೆಸರಿನಲ್ಲಿ ಜಗತ್ತನ್ನು ವಿಭಜಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಮುಖಂಡರು ತಮ್ಮ ಪ್ರಭಾವವನ್ನು ಬಳಸಿಕೊಂಡು ಮಣ್ಣನ್ನು ಉಳಿಸಲು ಜನರನ್ನು ಪ್ರೇರೇಪಿಸಬೇಕು. ಏಕೆಂದರೆ ನಾವು ಅರಿವಿಲ್ಲದೆ ಸೃಷ್ಟಿಸಿದ ಎಲ್ಲಾ ವಿಭಾಗಗಳನ್ನು ಮೀರಿ ಮಣ್ಣು ನಮ್ಮನ್ನು ಒಂದುಗೂಡಿಸುತ್ತದೆ ಎಂದರು.