ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಪಿ ತೆಗೆದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು “COP28 ನಲ್ಲಿ ಉತ್ತಮ ಸ್ನೇಹಿತ” ಎಂದು ಬಣ್ಣಿಸಿದ್ದಾರೆ. ದುಬೈನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭೇಟಿಯಾದ ಉಬಯ ರಾಷ್ಟ್ರಗಳ ನಾಯಕರು, ಮಾತುಕತೆ ನಡೆಸಿದರು.
ಪ್ರಸ್ತುತ ಯುಎಇಯಲ್ಲಿ ಹವಾಮಾನ ಸಮ್ಮೇಳನ ನಡೆಯುತ್ತಿದೆ. ಈ ಸಮಾವೇಶದಲ್ಲಿ ಜಗತ್ತಿನ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ಪೈಕಿ ಪ್ರಧಾನಿ ಮೋದಿ ಕೂಡ ಒಬ್ಬರು. COP28 ಶೃಂಗಸಭೆಯಲ್ಲಿ, ಪಿಎಂ ಮೋದಿ ಅವರು ಪರಿಸರದ ಬಗ್ಗೆ ಚಿಂತಿಸಲು ಎಲ್ಲಾ ದೇಶಗಳಿಗೆ ಕರೆ ನೀಡಿದರು. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಅನೇಕ ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
COP28 ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
COP28 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಚಿಂತಿಸಬೇಕು ಎಂದರು. ನಮ್ಮ ಆರೋಗ್ಯದ ಬಗ್ಗೆ ನಾವು ಯೋಚಿಸುವಂತೆಯೇ ನಾವು ಅದರ ಬಗ್ಗೆ ಯೋಚಿಸಬೇಕು. ಇಂಗಾಲದ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಹೊರಸೂಸುವಿಕೆ ತುಂಬಾ ಕಡಿಮೆ ಇದೆ. 2030 ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಜಾಗತಿಕ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ
ಮೋದಿ ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಜೋರ್ಡಾನ್ ರಾಜ ಅಬ್ದುಲ್ಲಾ II, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮೆರಾನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟರ್ಕಿ ಅಧ್ಯಕ್ಷ ಆರ್‌ಟಿ ಎರ್ಡೋಗನ್, ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು.