ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ, ಆರೆಂಜ್ ಅಲರ್ಟ್ ​, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ಈಶಾನ್ಯ ಮಾರುತಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ, ನವೆಂಬರ್ 22 ಹಾಗೂ 23ರಂದು ಕೇರಳದಲ್ಲಿ ಭಾರಿ ಮಳೆಯಾಗಲಿದೆ. ಹಾಗೆಯೇ ಇಂದು ತಮಿಳುನಾಡಿನಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಮುಂದಿನ ಎರಡು ದಿನಗಳಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಮಧ್ಯಂತರ ಮಳೆಯಾಗುವ ಮುನ್ಸೂಚನೆ ನೀಡಿದೆ. ಬುಧವಾರ ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಕೇರಳದಲ್ಲಿ ಈಗಾಗಲೇ ಮಳೆ ಶುರುವಾಗಿದೆ, ತಿರುವನಂತಪುರಂನಲ್ಲಿ 5 ಸೆಂ.ಮೀ ಮಳೆಯಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ ಮತ್ತು ಯಾನಂನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಗೋಚರಿಸಲಿದೆ.

ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಇಂದು ಪುದುಚೇರಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.​

ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಮುಂದಿನ ಎರಡು ದಿನಗಳಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಮಧ್ಯಂತರ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕದ 7 ಜಿಲ್ಲೆಗಳಲ್ಲೂ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯಪುರದಲ್ಲಿ 14.5 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಒಳನಾಡಿನಲ್ಲಿ ಕೆಲವೇ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.