2023ರ ಏಕದಿನ ವಿಶ್ವಕಪ್ ಅನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದ ಬಿಸಿಸಿಐ ಇದೀಗ 2024 ರ ಐಪಿಎಲ್ನತ್ತ ಚಿತ್ತ ನೆಟ್ಟಿದೆ. ಮುಂಬರುವ ಆವೃತ್ತಿಗೆ ಈಗಾಗಲೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯೂ ಆರಂಭವಾಗಿದೆ. ಇದರಡಿಯಲ್ಲಿ ಕೆಲವು ತಂಡಗಳು ಸಹ ತಮಗೆ ಅವಶ್ಯಕವಿರುವ ಆಟಗಾರರನ್ನು ಬೇರೆ ತಂಡದಿಂದ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಫ್ರಾಂಚೈಸಿಗಳು ಐಪಿಎಲ್ ಗೆಲ್ಲುವ ಸಲುವಾಗಿ ತಮ್ಮ ತಂಡಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ತಂಡದ ಆಡಳಿತ ವರ್ಗ ಹಾಗೂ ಕೋಚಿಂಗ್ ಸಿಬ್ಬಂದಿಗಳನ್ನು ಈಗಾಗಲೇ ಬದಲಿಸಿವೆ. ಇದೀಗ ಸಿಕ್ಕಿರುವ ಬಿಗ್ ಅಪ್ಡೇಟ್ ಪ್ರಕಾರ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಈಗ ಮತ್ತೊಮ್ಮೆ ಕೆಕೆಆರ್ ಅಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಗೌತಮ್ ಗಂಭೀರ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ತೊರೆದು ಕೆಕೆಆರ್ ತಂಡವನ್ನು ಸೇರಿಕೊಂಡಿರುವ ವಿಚಾರವನ್ನು ಕೆಕೆಆರ್ ಫ್ರಾಂಚೈಸಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ವಾಸ್ತವವಾಗಿ ಈ ಹಿಂದಿನಿಂದಲೂ ಗಂಭೀರ್ ಮತ್ತೆ ಕೆಕೆಆರ್ ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಫ್ರಾಂಚೈಸಿ ಆಗಲಿ ಗಂಭೀರ್ ಆಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಆದರೀಗ ಗಂಭೀರ್ ಕೆಕೆಆರ್ ಸೇರಿರುವುದು ಖಚಿತವಾಗಿದೆ.
ಕೆಕೆಆರ್ ಮೆಂಟರ್ ಆಗಿ ಗಂಭೀರ್ ಆಯ್ಕೆ
ಇದೀಗ ಕೆಕೆಆರ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿರುವ ಗಂಭೀರ್, ಮುಂದೆ ನಡೆಯಲ್ಲಿರುವ ಮಿನಿ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ. ಹಾಗೆ ನೋಡಿದರೆ, ಗಂಭೀರ್ ಅವಧಿಯಲ್ಲಿ ಲಕ್ನೋ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ತಂಡವು 2022 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಭಾಗವಹಿಸಿದಲ್ಲದೆ ಸತತ ಎರಡು ಬಾರಿ ಅಗ್ರ 4 ರಲ್ಲಿ ಸ್ಥಾನ ಪಡೆದಿತ್ತು. ಆದರೆ ಚಾಂಪಿಯನ್ ಆಗುವಲ್ಲಿ ಎಡವಿತ್ತು.
ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಚಾಂಪಿಯನ್
ಕೋಲ್ಕತ್ತಾ ನೈಟ್ ರೈಡರ್ಸ್ 2012 ರಲ್ಲಿ ಮತ್ತು ನಂತರ 2014 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಒಂದು ರೀತಿಯಲ್ಲಿ ಗಂಭೀರ್ ತವರಿಗೆ ಮರಳಿದ್ದಾರೆ ಎಂತಲೇ ಹೇಳಬಹುದಾಗಿದೆ. ಆದರೆ, ಮುಂದಿನ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಕೊಂಡೊಯ್ಯುವಲ್ಲಿ ಮೆಂಟರ್ ಆಗಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.
ಇನ್ನು ಲಕ್ನೋ ಫ್ರಾಂಚೈಸಿ ಕೂಡ ಈಗಾಗಲೇ ತನ್ನ ತಂಡಕ್ಕೆ ನೂತನ ಕೋಚ್ ಅನ್ನು ಆಯ್ಕೆ ಮಾಡಿದೆ. ಆದರೆ ಗೌತಮ್ ಗಂಭೀರ್ ಬದಲಿಗೆ ಯಾರು ಮೆಂಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡಿಸೆಂಬರ್ 19 ರಂದು ನಡೆಯಲಿರುವ ಹರಾಜಿಗೂ ಮೊದಲು ತಂಡಗಳಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ಇದಕ್ಕೂ ಮೊದಲು, ತಂಡವು ತನ್ನ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಹ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಂಡಗಳ ಬಗ್ಗೆ ಇನ್ನಷ್ಟು ದೊಡ್ಡ ಸುದ್ದಿಗಳು ಹೊರಬೀಳಲಿವೆ.