ಸದಸ್ಯತ್ವ ರದ್ದತಿ ಬಳಿಕ ಲಂಕಾ ಮಂಡಳಿಗೆ ಮತ್ತೊಂದು ಬಿಗ್ ಶಾಕ್ ನೀಡಿದ ಐಸಿಸಿ..!

ಏಕದಿನ ವಿಶ್ವಕಪ್ ನಡುವೆಯೇ ಐಸಿಸಿ ಸದಸ್ಯತ್ವ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಐಸಿಸಿ ಮತ್ತೊಂದು ಬಿಗ್ ಶಾಕ್ ನೀಡಿದೆ. ಇದೇ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್ ನಡೆಸಲು ತಯಾರಿ ಮಾಡಿಕೊಂಡಿದ್ದ ಶ್ರೀಲಂಕಾ ಮಂಡಳಿಗೆ ಈ ಅವಕಾಶ ಕೈತಪ್ಪಿದೆ. ಅಂದರೆ ಅಂಡರ್- 19 ವಿಶ್ವಕಪ್ ಆತಿಥ್ಯವನ್ನು ಲಂಕಾ ಮಂಡಳಿ ಕೈಯಿಂದ ಐಸಿಸಿ ಕಿತ್ತುಕೊಂಡಿದ್ದು, ಮುಂದಿನ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮೇಲೆ ಹೇಳಿದಂತೆ ಐಸಿಸಿ, ಮುಂದಿನ ವರ್ಷ ನಡೆಯಲ್ಲಿರುವ ಅಂಡರ್-19 ವಿಶ್ವಕಪ್ ಅನ್ನು ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದೆ. ಶ್ರೀಲಂಕಾ ಕ್ರಿಕೆಟ್‌ನಲ್ಲಿನ ಆಡಳಿತಾತ್ಮಕ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ, ಶ್ರೀಲಂಕಾ ಮಂಡಳಿಯನ್ನು ಅಮಾನತುಗೊಳಿಸುವ ತನ್ನ ನಿರ್ಧಾರವನ್ನು ಎತ್ತಿಹಿಡಿಯಲು ಐಸಿಸಿ ನಿರ್ಧರಿಸಿದೆ. ಇದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತ ನೀಡಿದೆ.

16 ತಂಡಗಳು ಭಾಗವಹಿಸಲಿವೆ

ಮುಂದಿನ ವರ್ಷ ನಡೆಯಲ್ಲಿರುವ ಅಂದರೆ, 2024ರಲ್ಲಿ ನಡೆಯಲ್ಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಈ 16 ತಂಡಗಳನ್ನು ತಲಾ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ 2020 ರ ಚಾಂಪಿಯನ್ ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಅಮೆರಿಕದೊಂದಿಗೆ ಪ್ರಸ್ತುತ ಚಾಂಪಿಯನ್ ಭಾರತ ಸ್ಥಾನ ಪಡೆದಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಜನವರಿ 14 ರಂದು ಆಡಲಿದೆ. ಇದಾದ ಬಳಿಕ ಜನವರಿ 18 ರಂದು ಅಮೆರಿಕ ಹಾಗೂ 20 ರಂದು ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಯಾವ ಗುಂಪಿನಲ್ಲಿ ಯಾವ ತಂಡ?

  • ಗುಂಪು ಎ: ಭಾರತ, ಬಾಂಗ್ಲಾದೇಶ, ಐರ್ಲೆಂಡ್, ಯುಎಸ್ಎ
  • ಗುಂಪು ಬಿ: ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್
  • ಗುಂಪು ಸಿ: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ನಮೀಬಿಯಾ
  • ಗುಂಪು ಡಿ: ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್, ನೇಪಾಳ