ಮುಂಬೈ ಜುಲೈ 22: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲವಾಡಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ದತ್ತು ಪಡೆಯಲಿದ್ದಾರೆ ಎಂದು ಶಿವಸೇನಾ ಹೇಳಿಕೆ ನೀಡಿದೆ. ಇರ್ಶಲವಾಡಿ ಭೂಕುಸಿತದಲ್ಲಿ ಹಲವಾರು ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ. 2 ವರ್ಷದಿಂದ 14 ವರ್ಷದೊಳಗಿನ ಈ ಅನಾಥ ಮಕ್ಕಳನ್ನು ಶ್ರೀಕಾಂತ್ ಶಿಂಧೆ ಫೌಂಡೇಶನ್ ನೋಡಿಕೊಳ್ಳುತ್ತದೆ ಎಂದು ಸಿಎಂ ಘೋಷಿಸಿದ್ದಾರೆ ಎಂದು ಶಿವಸೇನಾ ಹೇಳಿದೆ.
“ಸಿಎಂ ಏಕನಾಥ್ ಶಿಂಧೆ ಅವರ ಮಗ ನಡೆಸುತ್ತಿರುವ ಶ್ರೀಕಾಂತ್ ಶಿಂಧೆ ಫೌಂಡೇಶನ್ ಮೂಲಕ ಶಿಕ್ಷಣ ಮತ್ತು ಇತರ ವಿಷಯಗಳ ಎಲ್ಲಾ ವೆಚ್ಚಗಳನ್ನು ಮಾಡಲಾಗುವುದು. ಪ್ರತಿ ಮಗುವಿಗೆ ಅವರ ಶಿಕ್ಷಣಕ್ಕಾಗಿ ಎಫ್‌ಡಿ (ಸ್ಥಿರ ಠೇವಣಿ) ನೀಡಲಾಗುತ್ತದೆ ಎಂದು ಸಿಎಂ ಏಕನಾಥ್ ಶಿಂಧೆಯ ಒಎಸ್‌ಡಿ ಮಂಗೇಶ್ ಚಿವ್ಟೆ ಹೇಳಿದ್ದಾರೆ.
ಇರ್ಶಲವಾಡಿ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 22ಕ್ಕೇರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಾಯಗಢದ ಭೂಕುಸಿತ ಪೀಡಿತ ಇರ್ಶಲವಾಡಿಯಲ್ಲಿ ಶನಿವಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇಂದು (ಶನಿವಾರ) ಬೆಳಗ್ಗೆ ಎನ್‌ಡಿಆರ್‌ಎಫ್‌ನ ಒಂದು ತಂಡವು ಸ್ಥಳಕ್ಕೆ ತಲುಪಿದ್ದು, ಇಂದು ಹೆಚ್ಚಿನ ತಂಡಗಳು ಶೋಧ ಕಾರ್ಯಾಚರಣೆಗೆ ಸೇರುವ ನಿರೀಕ್ಷೆಯಿದೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮುಂಬೈನಿಂದ ಸುಮಾರು 80 ಕಿಮೀ ದೂರದಲ್ಲಿರುವ ರಾಯಗಢ ಜಿಲ್ಲೆಯ ಖಲಾಪುರ್ ತೆಹಸಿಲ್‌ನ ಬೆಟ್ಟದ ಇಳಿಜಾರಿನಲ್ಲಿರುವ ಬುಡಕಟ್ಟು ಹಳ್ಳಿಯಲ್ಲಿ ಭೂಕುಸಿತ ಸಂಭವಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಶಿಂಧೆ ಅವರೊಂದಿಗೆ ಮಾತನಾಡಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಿರ್ವಹಿಸಲು ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಶಾ ಹೇಳಿದ್ದಾರೆ.