ಬೆಂಗಳೂರು, ಜುಲೈ 22: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಪ್ರಚೋದನಕಾರಿ ಪೋಸ್ಟರ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಶ್ರೀರಾಮ್, ಮೋಹನ್, ನಂದಕುಮಾರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ 20 ಕಡೆ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಮೂವರ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯನ್ನು ಸೋಲಿಸಬೇಕು ಎಂದು ಒಟ್ಟು 26 ಪಕ್ಷಗಳ 50 ಕ್ಕೂ ಹೆಚ್ಚು ನಾಯಕರು ಸಮಾಲೋಚನೆ ನಡೆಸಿದ್ದರು. ಜುಲೈ 18ರಂದು ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಮಹಾಮೈತ್ರಿ ಸಭೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಚೋದನಕಾರಿ ಪೋಸ್ಟರ್ ಹಾಕಲಾಗಿತ್ತು. ನಗರದ ತಾಜ್ವೆಸ್ಟ್ ಎಂಡ್ ಹೋಟೆಲ್ ಬಳಿ ಬಿಹಾರದಲ್ಲಿ ಇತ್ತೀಚಿಗೆ ಕುಸಿದಿದ್ದ “ಸುಲ್ತಾನ್ ಗಂಜ್ ಸೇತುವೆ”ಯ ಪೋಸ್ಟರ್ ಹಾಕಿ “ಅಸ್ಥಿರ ಪ್ರಧಾನಿ ಅಭ್ಯರ್ಥಿ” ಎಂದು ವ್ಯಂಗ್ಯ ಮಾಡಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟರ್ ತೆರವುಗೊಳಿಸಿದ್ದರು. ಇಷ್ಟೆಲ್ಲ ಆದ ಬಳಿಕ ಈ ಬಗ್ಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಸದ್ಯ ಈಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು ಆರೋಪಿ ಶ್ರೀರಾಮ್ ಪೋಸ್ಟರ್ ಹಾಕಲು ಹಣ ಸಂದಾಯ ಮಾಡಿದ್ದ. ನಂದಕುಮಾರ್ ಎಂಬಾತನ ಪ್ರಿಂಟಿಂಗ್ ಪ್ರೆಸ್ನಲ್ಲಿ ಪೋಸ್ಟರ್ ಮುದ್ರಿಸಲಾಗಿತ್ತು. ಮೋಹನ್ಗೆ ಸೇರಿದ ಟೆಂಪೋದಲ್ಲಿ ಆರೋಪಿಗಳು ಪೋಸ್ಟರ್ ಇಟ್ಟಿದ್ದರು. ಬಂಧಿತ ಮೂವರು ಆರೋಪಿಗಳು ಶೇಷಾದ್ರಿಪುರಂ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಮಹಾಮೈತ್ರಿ ಸಭೆಯಲ್ಲಿ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಶರದ್ ಪವಾರ್, ಉದ್ದವ ಠಾಕ್ರೆ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಹಾಗೂ ಕಾಂಗ್ರೆಸ್ ನೇತೃತ್ವದ ಹೊಸ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲಾಗಿದ್ದು ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲಾಯನ್ಸ್ ಎಂದು ಘೋಷಿಸಲಾಗಿದೆ.