ಬೆಂಗಳೂರು: ಎನ್ಆರ್ಐಗಳಿಗಾಗಿ ಒಂದು ಪ್ರತ್ಯೇಕ ಇಲಾಖೆ ತೆರೆಯಲು ನಾವು ಸಿದ್ಧರಾಗಿದ್ದೇವೆ. ಈ ಬಗ್ಗೆ ಎನ್ಆರ್ಐಗಳು ನಮಗೆ ಮನವಿ ಮಾಡಿದ್ದರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಬೆಂಗಳೂರಿಗೆ ತನ್ನದೆ ಆದ ಇತಿಹಾಸವಿದೆ. ರಾಜಕೀಯ ನಾಯಕರು, ಉದ್ಯಮದಾರರು ಬೆಂಗಳೂರು ಬೆಳೆಯಲು ಕಾರಣರಾಗಿದ್ದಾರೆ. ಸರ್ಕಾರ ನಿಮ್ಮ ಸೇವೆಯನ್ನು ಗೌರವಿಸುತ್ತೆ. ದೇಶದಲ್ಲಿ ಬೇರೆ ಬೇರೆ ಕಾನೂನು ಇದ್ದರೂ ಸಹ, ನಾವು ಉದ್ಯಮದಾರರು ಶಕ್ತಿಶಾಲಿಯಾಗಿರಬೇಕು ಎಂದರು.
ಕೇರಳದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲ್ಲ. ತಮಿಳುನಾಡಿನಲ್ಲಿ ಸ್ವಲ್ಪ ಅವಕಾಶ ಇದೆ. ಆಂಧ್ರಪ್ರದೇಶದಲ್ಲಿ ಈಗ ಕೈಗಾರಿಕೆ ಸ್ಥಾಪನೆ ಶುರುವಾಗಿದೆ. ನಮ್ಮಲ್ಲಿ ಹೂಡಿಕೆಗೆ ಮುಕ್ತವಾಗಿದೆ. ಉದ್ಯೋಗ ಸೃಷ್ಟಿ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷಿಗೆ ನೀವು ಆಲೋಚನೆ ಮಾಡಬೇಕು. ನಮ್ಮ ಹಳ್ಳಿ ಮಕ್ಕಳು ಬಹಳ ಬುದ್ದಿವಂತರಿದ್ದಾರೆ. ಆ ಭಾಗದ ಯುವಕರಿಗೆ ಉದ್ಯೋಗ ಸಿಗಲಿ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕು ಎಂದು ಹೇಳಿದರು.
ಸಿಂಗಲ್ ವಿಂಡೋ ಕ್ಲಿಯರೆನ್ಸ್ ತೆರೆಯಲು ನಾವು ಬದ್ಧ
ರಾಜ್ಯದಲ್ಲಿ ಸಮರ್ಪಕವಾಗಿ ಬದಲಾವಣೆ ತರಲು ನಿರ್ಧರಿಸಲಾಗಿದೆ. ಕೈಗಾರಿಕೆಗಳಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ತರಲು ನಾವು ಬದ್ಧರಾಗಿದ್ದೇವೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೆಐಎಡಿಬಿನಲ್ಲಿನ ವ್ಯಾಜ್ಯ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕೆ ರಾಜ್ಯಕ್ಕೆ ಬರಲು ಯಾವ ರೀತಿ ಹೆಜ್ಜೆ ಇಡಬೇಕೆಂದು ಯೋಚಿಸಿ ದಿಟ್ಟ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಉದ್ಯಮಕ್ಕೆ ಪೂರಕ ವಾತಾವರಣವಿದೆ. ಫಾಕ್ಸಕಾನ್ ಕಂಪನಿಗೆ 300 ಎಕರೆ ಭೂಮಿ ನೀಡಲಾಗಿದೆ. ಕರ್ನಾಟಕಕ್ಕೆ ಇನ್ನೊಂದು ಫಾಕ್ಸಕಾನ್ ಘಟಕ ಕೂಡ ಆಗಮಿಸುತ್ತಿದೆ. ಗ್ರೀನ್ ಹೈಡ್ರೋಜನ್ ಕೈಗಾರಿಕೆಗಳ ಸ್ಥಾಪನೆಗೂ ಯೋಜನೆ ಸಿದ್ಧವಾಗಿದೆ. ಟಾಟಾ ಟೆಕ್ ಎಂಎಸ್ಎಂಇ ಸ್ಥಾಪನೆಗಾಗಿ ಸರ್ಕಾರ ಆಸಕ್ತಿ ತೋರಿದೆ. ಟಾಟಾ ಶೇ 70 ರಷ್ಟು, ಸರ್ಕಾರ ಶೇ.30ರಷ್ಟು ಬಂಡವಾಳ ಹೂಡಿಕೆ ಮಾಡಲಿದೆ. ಇಡೀ ವಿಶ್ವದಲ್ಲೇ ರಫ್ತು ವಿಚಾರದಲ್ಲಿ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದರು.
ಹೂಡಿಕೆ ಹೆಚ್ಚಾಗಬೇಕಾದರೆ ಕೈಗಾರಿಕೆಗೆ ಪ್ರೋತ್ಸಾಹ ನೀಡಬೇಕು
ಹೂಡಿಕೆ ಹೆಚ್ಚಾಗಬೇಕಾದರೆ ಕೈಗಾರಿಕೆಗೆ ಪ್ರೋತ್ಸಾಹ ನೀಡಬೇಕಿದೆ. 68 ಉದ್ಯಮಿಗಳಿಗೆ ಶ್ರೇಷ್ಠ ರಫ್ತು ಪ್ರಶಸ್ತಿ ಪ್ರದಾನ ಮಾಡಿದ್ದೇವೆ. ದೇಶ, ವಿದೇಶಗಳಿಗೆ ರಫ್ತು ಮಾಡಿ ಪ್ರಶಸ್ತಿ ಗಳಿಸೋದು ದೊಡ್ಡ ಸಾಧನೆ. ಕೈಗಾರಿಕೆ ಬೆಳವಣಿಗೆ ಆಗಬೇಕೆಂಬುದು ಸಚಿವ ಎಂ.ಬಿ.ಪಾಟೀಲ್ ಆಸೆ. ಎಂ.ಬಿ.ಪಾಟೀಲ್ ಮತ್ತು ಉದ್ಯಮಿಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭ ಮಾಡಿದ್ದೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರು.