ಬೆಂಗಳೂರು: ಉಚಿತ ಬಸ್ ಪ್ರಯಾಣ ಆರಂಭವಾಗಿದ್ದೇ ತಡ ಮಹಿಳಾಮಣಿಗಳು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ ಏರಿ ಪ್ರಯಾಣಿಸಲು ಆರಂಭಿಸಿದ್ದಾರೆ. ಬಿಎಂಟಿಸಿ ಬಸ್‌ಗಳು ಫುಲ್ ರಶ್ ಆಗಿದ್ದು, ಪುರುಷರಿಗೆ ಸೀಟ್ ಸಿಗೋದೇ ಕಷ್ಟವಾಗಿದೆ. ಈ ಹಿನ್ನೆಲೆ ಪುರುಷರು ವೋಲ್ವೋ ಬಸ್‌ಗಳ ಮೊರೆ ಹೋಗಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಬಂದಮೇಲೆ ಐಷಾರಾಮಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಐಷಾರಾಮಿ ಬಸ್ ಮತ್ತು ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದರೆ ಬಿಎಂಟಿಸಿಯ ಐಷಾರಾಮಿ ಬಸ್‌ಗಳಿಗೆ ಶಕ್ತಿ ಯೋಜನೆ ಬೊಕ್ಕಸ ತುಂಬಿಸುತ್ತಿದೆ. ಕಳೆದ ಒಂದು ವಾರದಲ್ಲಿ ವೋಲ್ವೋ ಮತ್ತು ವಜ್ರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿರುವುದರಿಂದ ಪುರುಷ ಪ್ರಯಾಣಿಕರು ವೋಲ್ವೋ ಬಸ್‌ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆಯಲ್ಲಿ 10,000 ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ.
ಪ್ರತಿನಿತ್ಯ ಬೆಂಗಳೂರಿನಲ್ಲಿ ಬಿಎಂಟಿಸಿಯ 470 ವೋಲ್ವೋ ಬಸ್‌ಗಳು ಓಡಾಡುತ್ತಿವೆ. ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ 3-5% ಏರಿಕೆಯಾಗಿದ್ದು, ಜೂನ್ ತಿಂಗಳ 21 ದಿನಗಳ ಲೆಕ್ಕಾಚಾರದ ಪ್ರಕಾರದ ಪ್ರತಿದಿನ 1,16,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ ಅತಿಹೆಚ್ಚು ಪ್ರಯಾಣಿಕರು ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರೇ ಅತಿಹೆಚ್ಚು ಪ್ರಯಾಣಿಸಿರುವುದು ವಿಶೇಷವಾಗಿದೆ.