ಏಕರೂಪ ನಾಗರಿಕ ಸಂಹಿತೆ ಎಂದರೇನು? ಯಾರಿಗೆಲ್ಲಾ ಅನ್ವಯಿಸುತ್ತೆ ಇಲ್ಲಿದೆ ಮಾಹಿತಿ

ಬಿಜೆಪಿಯ ಮುಂದೆ ಮೂರು ಮುಖ್ಯ ಅಜೆಂಡಾಗಳಿವೆ. ಇವುಗಳಲ್ಲಿ ಮೊದಲನೆಯದು ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್-370 ಅನ್ನು ತೆಗೆದುಹಾಕುವುದು. ಎರಡನೆಯದಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಮತ್ತು ಮೂರನೆಯದಾಗಿ, ಇಡೀ ದೇಶದಲ್ಲಿ  ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು. ಮೊದಲ ಎರಡು ಅಜೆಂಡಾದಲ್ಲಿ ಕೆಲಸ ಮುಗಿಸಿದ ಬಿಜೆಪಿ ಈಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸುತ್ತಿದೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆ ಕುರಿತು ಕೇಂದ್ರ ಸರ್ಕಾರ ಕಾನೂನು ಆಯೋಗದಿಂದ ಸಲಹೆಗಳನ್ನು ಕೋರಿತ್ತು.

ಇದರ ನಂತರ, ಜೂನ್ 14 ರಂದು, ದೇಶದ 22 ನೇ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ಕುರಿತು ತಮ್ಮ ಅಭಿಪ್ರಾಯವನ್ನು 30 ದಿನಗಳ ಒಳಗೆ ನೀಡುವಂತೆ ಸಾರ್ವಜನಿಕ ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ ವಿವಿಧ ಪಕ್ಷಗಳಿಗೆ ಕೇಳಿದೆ. ಹೀಗಿರುವಾಗ ಈ ವಿಚಾರ ಮತ್ತೊಮ್ಮೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಸರ್ಕಾರವು ಈ ಹಿಂದೆಯೂ 21ನೇ ಕಾನೂನು ಆಯೋಗದಿಂದ ಯುಸಿಸಿ ಕುರಿತು ಸಲಹೆಗಳನ್ನು ಕೇಳಿತ್ತು. ಈ ಕುರಿತು ಆಯೋಗವು ಸಮಾಜದ ಎಲ್ಲಾ ವರ್ಗಗಳ ಮೇಲೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಗತ್ಯವನ್ನು ಪರಿಶೀಲಿಸಿತ್ತು.

ಏಕರೂಪ ನಾಗರಿಕ ಸಂಹಿತೆ ಅಥವಾ UCC ಎಂದರೇನು? 

ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ, ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.

ಸಂವಿಧಾನದ 44ನೇ ವಿಧಿಯಲ್ಲಿ ಎಲ್ಲ ನಾಗರಿಕರಿಗೂ ಸಮಾನ ಕಾನೂನನ್ನು ಜಾರಿಗೆ ತರಲು ಹೇಳಲಾಗಿದೆ. ಆರ್ಟಿಕಲ್-44 ಅನ್ನು ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ‘ಕ್ರಿಮಿನಲ್ ಕೋಡ್’ ಇದೆ, ಆದರೆ ಏಕರೂಪದ ನಾಗರಿಕ ಕಾನೂನು ಇಲ್ಲ.

ಏಕರೂಪ ನಾಗರಿಕ ಸಂಹಿತೆ, UCC ಭಾರತದಲ್ಲಿ ಎಲ್ಲಾ ಕಡೆಯೂ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ತನ್ನ ನಿರ್ಧಾರಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಹಲವು ಬಾರಿ ಒತ್ತಾಯಿಸಿದೆ.

1835 ರಲ್ಲಿ ಬ್ರಿಟಿಷ್ ಸರ್ಕಾರದ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಇದರಲ್ಲಿ ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಗಳಂತಹ ವಿಷಯಗಳ ಬಗ್ಗೆ ಏಕರೂಪದ ಕಾನೂನು ಅನ್ವಯಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

ಈ ವರದಿಯಲ್ಲಿ ಹಿಂದೂ-ಮುಸ್ಲಿಮರ ಧಾರ್ಮಿಕ ಕಾನೂನುಗಳನ್ನು ತಿದ್ದುವ ಮಾತಿಲ್ಲ. ಆದಾಗ್ಯೂ, 1941 ರಲ್ಲಿ, ಹಿಂದೂ ಕಾನೂನನ್ನು ಕ್ರೋಡೀಕರಿಸಲು ಬಿಎನ್ ರಾವ್ ಸಮಿತಿಯನ್ನು ರಚಿಸಲಾಯಿತು. ರಾವ್ ಸಮಿತಿಯ ಶಿಫಾರಸಿನ ಮೇರೆಗೆ, ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ಉತ್ತರಾಧಿಕಾರದ ವಿಷಯಗಳನ್ನು ಇತ್ಯರ್ಥಗೊಳಿಸಲು 1956 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಮಸೂದೆಯನ್ನು ಅಂಗೀಕರಿಸಲಾಯಿತು.  ಆದಾಗ್ಯೂ, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳಿಗೆ ಪ್ರತ್ಯೇಕ ಕಾನೂನುಗಳನ್ನು ಇರಿಸಲಾಯಿತು.

ಈಗ ಏಕರೂಪ ನಾಗರಿಕ ಸಂಹಿತೆಯ ಸ್ಥಿತಿ ಹೇಗಿದೆ ಭಾರತೀಯ ಗುತ್ತಿಗೆ ಕಾಯಿದೆ-1872, ಆಸ್ತಿ ವರ್ಗಾವಣೆ ಕಾಯ್ದೆ-1882 ಎಲ್ಲಾ ನಾಗರಿಕರಿಗೆ ಅನ್ವಯವಾಗುವ ಒಂದೇ ರೀತಿಯ ನಿಯಮಗಳನ್ನು ಹೊಂದಿವೆ. ಅದೇ ಸಮಯದಲ್ಲಿ, ಧಾರ್ಮಿಕ ವಿಷಯಗಳಲ್ಲಿ ಕಾನೂನುಗಳು ಎಲ್ಲರಿಗೂ ವಿಭಿನ್ನವಾಗಿವೆ. ಅವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಇದನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ.

ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಅವರವರ ಧರ್ಮದ ಪ್ರಕಾರ ಬದುಕಲು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸಂವಿಧಾನದ 25 ನೇ ವಿಧಿಯು ತನ್ನ ಸ್ವಂತ ಧರ್ಮವನ್ನು ಆಚರಿಸಲು ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳುತ್ತದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಅಷ್ಟು ಸುಲಭವಲ್ಲ, ಧಾರ್ಮಿಕ ಸಂಘಟನೆಗಳು ಇದರ ವಿರುದ್ಧ ನಿಂತಿವೆ, ಏಕ ರೂಪ ಸಂಹಿತೆಯ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಇಸ್ಲಾಮಿಕ್ ಸಂಘಟನೆಗಳು ಅದರ ವಿರುದ್ಧ ಧ್ವನಿ ಎತ್ತುತ್ತವೆ.