ಗುಜರಾತ್: ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಮದ್ಯ, ಟೇಬಲ್​ ಫ್ಯಾನ್​ಗಳನ್ನು ಕದ್ದ ಐವರು ಪೊಲೀಸರ ಬಂಧನ

ಗುಜರಾತ್ ಪೊಲೀಸರು ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ 1.97 ಲಕ್ಷ ರೂ. ಮೌಲ್ಯದ 125 ಮದ್ಯದ ಬಾಟಲಿಗಳು, 15 ಟೇಬಲ್ ಫ್ಯಾನ್‌ಗಳನ್ನು ಕದ್ದ ಐವರು ಪೊಲೀಸರನ್ನು ಬಂಧಿಸಲಾಗಿದೆ. ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಖಾನ್‌ಪುರ ತಾಲೂಕಿನ ಬಾಕೋರ್ ಪೊಲೀಸ್ ಠಾಣೆಯ ಲಾಕ್‌ಅಪ್‌ನಲ್ಲಿ ಮದ್ಯದ ಬಾಟಲಿಗಳು ಮತ್ತು ಫ್ಯಾನ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪಿಎಸ್ ವಾಲ್ವಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಭೇಟಿಗೆ ಮುಂಚಿತವಾಗಿ, ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳ ದಾಖಲೆಯನ್ನು ನೀಡುವಂತೆ ಮತ್ತು ಪೊಲೀಸ್ ಠಾಣೆಯನ್ನು ಅಚ್ಚುಕಟ್ಟಾಗಿ ಮಾಡಲು ಕೇಳಲಾಗಿತ್ತು. ಆದಾಗ್ಯೂ, ಲಾಕ್-ಅಪ್ ಅನ್ನು ಸ್ವಚ್ಛಗೊಳಿಸುವಾಗ, IMFL ಬಾಟಲಿಗಳು ಮತ್ತು ಫ್ಯಾನ್ಗಳ ಖಾಲಿ ಅಥವಾ ಮುರಿದ ಪೆಟ್ಟಿಗೆಗಳು ಕಂಡುಬಂದಿವೆ ಎಂದು ಅಧಿಕಾರಿ ಹೇಳಿದರು.

ಪರಿಶೀಲನೆ ನಡೆಸಿದಾಗ, 1.57 ಲಕ್ಷ ಮೌಲ್ಯದ 125 ಐಎಂಎಫ್‌ಎಲ್ ಬಾಟಲಿಗಳು ಮತ್ತು 40,500 ರೂಪಾಯಿ ಮೌಲ್ಯದ 15 ಫ್ಯಾನ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ನ.13 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ವಾಲ್ವಿ ತಿಳಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, ಎಎಸ್‌ಐ ಅರವಿಂದ್‌ ಅವರು ಅಕ್ಟೋಬರ್‌ 25ರ ರಾತ್ರಿ ಕರ್ತವ್ಯದಲ್ಲಿದ್ದಾಗ ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಖಾಂತ್ ಮತ್ತು ಹೆಡ್ ಕಾನ್‌ಸ್ಟೆಬಲ್ ಲಲಿತ್ ಪರ್ಮಾರ್ ರಾತ್ರಿ 10 ಗಂಟೆಯ ಸುಮಾರಿಗೆ ಲಾಕ್-ಅಪ್‌ಗೆ ಪ್ರವೇಶಿಸಿ ಕೆಲವು ಮದ್ಯದ ಬಾಟಲಿಗಳನ್ನು ಹೊತ್ತುಕೊಂಡು ಹೊರಬರುವುದನ್ನು ತೋರಿಸಿದೆ ಎಂದು ಅದು ಹೇಳಿದೆ.

ಖಾಂತ್ ಕೆಲಕಾಲ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಾಲ್ವಿ ಪ್ರಕಾರ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 380 (ಕಳ್ಳತನ) ಮತ್ತು ಇತರ ಸಂಬಂಧಿತ ಅಪರಾಧಗಳ ಅಡಿಯಲ್ಲಿ ಖಾಂತ್, ಪರ್ಮಾರ್ ಮತ್ತು ಇತರ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ಆರನೇ ಆರೋಪಿ, ಅವರಿಗೆ ಸಹಾಯ ಮಾಡಿದ ಸ್ಥಳೀಯ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ