ಕಲಬುರಗಿ, ನ.19: ಬಿಸಿಯೂಟದ ಸಾಂಬಾರ್ಗೆ ಬಿದ್ದು ಗಾಯಗೊಂಡಿದ್ದ ಬಾಲಕಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ . ಕಲಬುರಗಿಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಮಹಾಂತಮ್ಮ ಎಂಬ ಬಾಲಕಿ ಮಧ್ಯಾಹ್ನ ಊಟ ಮಾಡಲು ಎಂದು ಅಡುಗೆ ಮನೆಗೆ ಹೋಗಿದ್ದಾಗ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಶಾಲಾ ಮುಖ್ಯೋಪಾಧ್ಯಾಯ, ಅಡುಗೆ ಮೇಲ್ವಿಚಾರಕಿ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಘಟನೆ ಹಿನ್ನೆಲೆ
ನ.16ರಂದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಚಿಣಮಗೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಮಹಾಂತಮ್ಮ ಎಂಬ ಬಾಲಕಿ ಮಧ್ಯಾಹ್ನ 1.30ಕ್ಕೆ ಊಟದ ಸಮಯದಲ್ಲಿ ಊಟ ಮಾಡಲು ಅಡುಗೆ ಕೋಣೆಯತ್ತ ಹೋಗಿದ್ದಳು. ಈ ವೇಳೆ ಮಹಾಂತಮ್ಮ ಆಯಾತಪ್ಪಿ ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದಿದ್ದಳು. ಸಾಂಬಾರ್ ಪಾತ್ರೆಗೆ ಬಿದ್ದ ಪರಿಣಾಮ ಬಾಲಕಿ ಮಹಾಂತಮ್ಮ ಗಂಭೀರ ಗಾಯಗೊಂಡಿದ್ದು, ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇನ್ನೂ ಘಟನೆ ನಂತರ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯದ ಪರಿಣಾಮದಿಂದಲೇ ಎರಡನೇ ತರಗತಿ ಓದುತ್ತಿದ್ದ ಬಾಲಕಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದಾಳೆಂದು ಪೋಷಕರು ಆಕ್ರೋಶ ಹೊರ ಹಾಕಿದ್ದರು. ಶಾಲೆಯಲ್ಲಿ ಅಡುಗೆ ಕೋಣೆ ಕಡೆ ಯಾರೊಬ್ಬ ಮಕ್ಕಳನ್ನ ಬಿಡಬಾರದು. ಮಕ್ಕಳು ಅಡುಗೆ ಕೋಣೆಯತ್ತ ಬರದಂತೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು. ಆದರೆ ಇಲ್ಲಿ ಮಾತ್ರ ಇಬ್ಬರ ನಿರ್ಲಕ್ಷ್ಯದಿಂದ ಪುಟ್ಟ ಬಾಲಕಿ ಆಯಾ ತಪ್ಪಿ ಸಾಂಬಾರ್ ಪಾತ್ರೆಗೆ ಬಿದ್ದಿದ್ದು, ತೀವ್ರ ತರದ ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು. ಬಳಿಕ ಶಾಲಾ ಮುಖ್ಯೋಪಾಧ್ಯಾಯ, ಅಡುಗೆ ಮೇಲ್ವಿಚಾರಕಿ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.