ಮಂಗಳೂರು, ಜೂನ್ 13: ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನದಿಂದ ಎನ್ನಲಾದ ಬೆದರಿಕೆ ಕರೆಗಳು ಬರುತ್ತಿವ ಬಗ್ಗೆ ವರದಿಯಾಗಿದೆ. ಪೊಲೀಸರ ಹೆಸರಿನಲ್ಲಿ ಬರುತ್ತಿರುವ ನಕಲಿ ಕರೆಗಳಿಂದ ಪೋಷಕರು ಆತಂಕಕ್ಕೊಳಗಾಗುವಂತಾಗಿದೆ. ದೂರವಾಣಿ ಮೂಲಕ ಕರೆ ಮಾಡುವವರು, ‘ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ಬಿಡುಗಡೆ ಮಾಡಬೇಕಾದರೆ ಸಹಾಯ ಮಾಡುತ್ತೇವೆ’ ಎಂದು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.
ಜನರಿಂದ ಹಣ ಪೀಕಿಸಲು ವಿದೇಶದಲ್ಲಿ ಕುಳಿತು ವಂಚಕರು ತಂತ್ರ ಹೂಡಿರುವ ಅನುಮಾನ ಇದೀಗ ಬಲವಾಗಿದೆ. ದುಷ್ಕರ್ಮಿಗಳು ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್, ಸಂತ ಆಗ್ನೆಸ್, ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿಗಳ ಪೋಷಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿ ಸೋಗಿನಲ್ಲಿಯೂ ದುಷ್ಕರ್ಮಿಗಳ ತಂಡ ದೂರವಾಣಿ ಕರೆ ಮಾಡುತ್ತಿದೆ. ಪಾಕಿಸ್ತಾನ, ಪೋಲಂಡ್, ಕೆನಡಾದ ಕೋಡ್ ಸಂಖ್ಯೆ ಬಳಸಿ ಕರೆ ಮಾಡಲಾಗುತ್ತಿದೆ.
ಜೂನ್ 11 ರಿಂದ ಈವರಗೆ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರನ್ನು ಟಾರ್ಗೆಟ್ ಮಾಡಿರುವ ದುರುಳರು ದೂರವಾಣಿ ಕರೆ ಮಾಡಿದ್ದಾರೆ. ‘ನಿಮ್ಮ ಮಕ್ಕಳು ಕಿಡ್ನಾಪ್ ಆಗಿದ್ದಾರೆ, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಕರೆ ಮಾಡಿದವರು ಹೇಳಿದಾಗ ಪೋಷಕರು ಕಂಗಾಲಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಪೋಷಕರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವಂಚಕರು ಹಿಂದಿಯಲ್ಲಿ ಮಾತನಾಡಿ ಬೆದರಿಕೆ ಹಾಕುತ್ತಿರುವುದು ತಿಳಿದುಬಂದಿದೆ.
ಅಖಾಡಕ್ಕಿಳಿದ ಸೈಬರ್ ಕ್ರೈಂ ಪೊಲೀಸರು
ಬೆದರಿಕೆ ಕರೆ ಬೆನ್ನಲ್ಲೇ ಕಾಲೇಜುಗಳಿಗೆ ಹೋಗಿ ಮಕ್ಕಳ ಇರುವಿಕೆಯ ಬಗ್ಗೆ ಪೋಷಕರು ಖಚಿತ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಡಾಟಾಬೇಸ್ ಸೈಟ್ಗಳಿಂದ ವಿದ್ಯಾರ್ಥಿಗಳು, ಪೋಷಕರ ಮಾಹಿತಿಗಳನ್ನು ವಂಚಕರು ಪಡೆದಿರುವ ಸಂಶಯ ವ್ಯಕ್ತವಾಗಿದೆ. ನಕಲಿ ಕರೆಗಳ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜತೆಗೆ, ನಕಲಿ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?
ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದು, ಮಂಗಳೂರಿನ ಕೆಲ ಶಾಲೆ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ವಾಟ್ಸಪ್ ಕಾಲ್ ಬರ್ತಿದೆ. ವಿದೇಶಿ ನಂಬರ್ಗಳಿಂದ ಕರೆ ಬರ್ತಿದೆ. ಪೊಲೀಸ್ ಅಧಿಕಾರಿಗಳ ಭಾವಚಿತ್ರ ಹಾಕಿ ಕರೆ ಮಾಡ್ತಿದ್ದಾರೆ. ನಿಮ್ಮ ಮಕ್ಕಳು ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ಬೆದರಿಸುತ್ತಿದ್ದಾರೆ. ಬಿಡುಗಡೆ ಮಾಡಲು ಐದು, ಹತ್ತು ಲಕ್ಷ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಶಾಲೆ, ಕಾಲೇಜು ಟೈಮ್ನಲ್ಲಿ ಕಾಲ್ ಮಾಡ್ತಿದ್ದಾರೆ ಎಂದರು.
ವಂಚಕರು ಹಿಂದಿ ಭಾಷೆಯಲ್ಲಿ ಮಾತನಾಡಿ ಹೆದರಿಸುತ್ತಾ ಇದ್ದಾರೆ. ಇದರ ಜೊತೆ ನಿಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಿದ್ದೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮಕ್ಕಳನ್ನು ಬಿಡುಗಡೆ ಮಾಡಲು 5 ಲಕ್ಷ ರೂ. ಹಣ ನೀಡಬೇಕೆಂದು ಒತ್ತಡ ಹೇರುತ್ತಾರೆ. ಈ ಬಗ್ಗೆ ಶಾಲೆ ಕಾಲೇಜುಗಳಲ್ಲಿ ನಾವು ಚೆಕ್ ಮಾಡಿದಾಗ ಎಲ್ಲಾ ಮಕ್ಕಳು ಹಾಜರಿದ್ದರು. ಸೈಂಟ್ ಆಗ್ನೇಸ್ ವಿದ್ಯಾರ್ಥಿಗಳ ಪೋಷಕರಿಗೆ ಐದು ಕರೆ ಬಂದಿವೆ. ಅಲೋಷಿಯಸ್, ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೂ ಕರೆ ಬಂದಿವೆ. ಇಲ್ಲಿವರೆಗೆ 10 ಕಡೆ ಈ ರೀತಿ ಕರೆಗಳು ಬಂದಿವೆ. ಈ ಸಂಬಂಧ ಮಾಹಿತಿ ಸಂಗ್ರಹಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಫೆಡೆಕ್ಸ್ ಇಂಟರ್ನ್ಯಾಷನಲ್ ಕೊರಿಯರ್ ಹೆಸರಿನಲ್ಲಿ ನಕಲಿ ಕರೆ ಮಾಡಿದ ವಂಚಕರ ಮೋಸದ ಬಲೆಗೆ ಬಿದ್ದು ಹಲವು ಮಂದಿ ಹಣ ಕಳೆದುಕೊಂಡ ಘಟನೆಗಳು ಮಂಗಳೂರು ಸುತ್ತಮುತ್ತ ಇತ್ತೀಚೆಗೆ ವರದಿಯಾಗಿದ್ದವು. ಇದೀಗ ಹೊಸ ವಿಧಾನದ ಮೂಲಕ ಸೈಬರ್ ವಂಚಕರು ಜನರನ್ನು ಮೋಸಗೊಳಿಸಿ ಹಣ ಎಗರಿಸುತ್ತಿದ್ದಾರೆ.