ಆ. 20 ರಿಂದ ಡಿ. ದೇವರಾಜ ಅರಸು ಜನ್ಮದಿನ ಆಚರಣೆ: ಎಡಿಸಿ ರಾಜು ಮೊಗವೀರ

ಕಾರವಾರ: ಸರ್ಕಾರದ ನಿರ್ದೇಶನದಂತೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರವರ 107 ನೇ ಜನ್ಮದಿನಾಚರಣೆಯನ್ನು ಈ ಬಾರಿ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಡಿ. ದೇವರಾಜು ಅರಸು 107 ನೇ ಜನ್ಮ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳು ಅಥವಾ ಸಂಘ-ಸಂಸ್ಥೆಗಳನ್ನು ಗುರುತಿಸಿ ಒಬ್ಬರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ಯಾವುದೇ ಸಮುದಾಯದ ಕುಲ ಕಸುಬಿಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಹಾಗೂ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅರಸು ಅವರ ಜನ್ಮ ದಿನವಾದ ಆಗಸ್ಟ 20 ರಿಂದ 24 ರವರೆಗೆ 4 ದಿನಗಳ ಕಾಲ ಮಳಿಗೆ ತರೆಯಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಮಕ್ಕಳಿಗೆ ಯೋಗ, ಕ್ರೀಡಾ ಸ್ಪರ್ಧೆ, ಅರಣ್ಯದ ಮಹತ್ವದ ತಿಳುವಳಿಕೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಬೇಕು ಹಾಗೂ ಇದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಒಂದು ಗಂಟೆಯ ಡಿ. ದೇವರಾಜ ಅರಸು ಅವರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೊಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.