ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಎಚ್ಚರಿಕೆ ವಹಿಸಿ: ರೂಪಾಲಿ ನಾಯ್ಕ

ಕಾರವಾರ: 75ನೇ ಸ್ವಾತಂತ್ರ‍್ಯೊತ್ಸವದ ಅಂಗವಾಗಿ ದೇಶದಾದ್ಯಂತ ಆಗಸ್ಟ್ 13 ರಿಂದ 15ರ ವರೆಗೆ ದೇಶಾಭಿಮಾನದಿಂದ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶದಂತೆ ಹರ್‌ ಘರ್ ತಿರಂಗಾ ಅಭಿಯಾನದಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ವಿತರಿಸುತ್ತಿರುವ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗ ಎಚ್ಚರಿಕೆವಹಿಸಬೇಕು ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಸೂಚಿಸಿದ್ದಾರೆ.

ನಗರದ ತಾಲೂಕಾ ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ಜರುಗಿದ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯಯಲ್ಲಿ ಮಾತನಾಡಿದರು. ದೇಶಾಭಿಮಾನದ ಸಂಕೇತವಾಗಿ ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕೆ ಗೌರವ ಕೊಡುವ ಉದ್ದೇಶದಿಂದ “ಹರ್ ಘರ್ ತಿರಂಗಾ” ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಹಶಿಲ್ದಾರ ಕಚೇರಿಯಿಂದ ಹಾಗೂ ಆಸಕ್ತ ಅಭಿಮಾನಿಗಳಿಂದ ರಾಷ್ಟ್ರಧ್ವಜ ವಿತರಣೆಗೆ ಕಾರ್ಯ ಯೋಜನೆ ರೂಪಿಸಲಾಗಿದೆ.

ನಗರ ಪ್ರದೇಶದಲ್ಲಿ ನಗರಸಭೆ ಅಧಿಕಾರಿಗಳಿಗೆ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ರಾಷ್ಟ್ರಧ್ವಜವನ್ನು ವಿತರಿಸುವ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಬ್ಬರಿಗೂ ಗೌರವಯುತವಾಗಿ ರಾಷ್ಟ್ರಧ್ವಜ ತಲುಪಿಸಬೇಕು. ಗ್ರಾಮೀಣ ಜನರಿಗೆ ರಾಷ್ಟ್ರಧ್ವಜ ಸಂಹಿತೆಯ ಕುರಿತು ಅರಿವು ಮೂಡಿಸಬೇಕು. ಜೊತೆಗೆ ಧ್ವಜಾರೋಹಣ ಹಾಗೂ ಧ್ವಜಾ ಅವರೋಹಣ ಸಂದರ್ಭದಲ್ಲಿ ಯಾವುದೇ ಅಚಾತುರ್ಯ ಘಟನೆಗಳು ಜರುಗದಂತೆ ಅಚ್ಚುಕಟ್ಟಾಗಿ ಸ್ವಾತಂತ್ರ‍್ಯೊತ್ಸವ ಆಚರಿಸಿ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ತಹಶೀಲ್ದಾರ ಎನ್.ಎಫ್. ನೋರೊನಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದಕುಮಾರ ಮುಂತಾದವರು ಉಪಸ್ಥಿತರಿದ್ದರು.