ಸಿದ್ದಾಪುರ: ಆಗಸ್ಟ್ ಕೊನೆಯಲ್ಲಿ ಆರಂಭಗೊಳ್ಳುವ ಗಣೇಶ ಚತುರ್ಥಿಗಾಗಿ ಸಿದ್ದಾಪುರದಲ್ಲಿ ವಿಘ್ನವಿನಾಯಕನ ಮೂರ್ತಿಗಳು ಸಿದ್ದಗೊಳ್ಳುತ್ತಿದೆ. ತುಟ್ಟಿಯಾಗಿರುವ ಬಣ್ಣದ ದರದ ನಡುವೆ ಗ್ರಾಹಕರು ಮಾಡುವ ಚೌಕಾಶಿಗೆ ಮೂರ್ತಿ ತಯಾರಕರು ತಲೆಬಾಗಲೇ ಬೇಕಾದ ಸ್ಥಿತಿ ಎದುರಾಗಿದೆ.
ಆಗಸ್ಟ್ 31 ರಿಂದ ನಡೆಯಲಿರುವ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ತಾಲೂಕಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮುಂದಾಗಿವೆ. ಹಬ್ಬಕ್ಕೆ ಪೂಜಿಸುವ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ಕಲಾಕಾರರು ತೊಡಗಿಕೊಂಡಿದ್ದಾರೆ.
ತಾಲೂಕಿನ ಮೂರ್ತಿ ತಯಾರಕರು ಹೆಗ್ಗರಣಿ ಸಮೀಪದ ಕುಂಬಾರಕುಳಿಯಿಂದ ಮಣ್ಣು ತಂದು ಹದಗೊಳಿಸಿ ಗಣೇಶನ ಮೂರ್ತಿ ತಯಾರಿಸುತ್ತಿದ್ದಾರೆ. ಸದ್ಯ ಸಿದ್ದಾಪುರದಲ್ಲಿ ಮಣ್ಣಿನ ಕೊರತೆ ಕಾಡುತ್ತಿಲ್ಲ. ಆದರೆ ಬಣ್ಣದ ದರ ಏರಿಕೆಯಾಗಿರುವುದು ತಯಾರಕರನ್ನು ಚಿಂತೆಗಿಳಿಸಿದೆ. ಸಣ್ಣ ಪಟ್ಟಣವಾದ ಸಿದ್ದಾಪುರದಲ್ಲಿ ಗ್ರಾಹಕರು ಕೇಳಿದ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯ ಪ್ರಸಂಗ ಎದುರಾಗಿದೆ. ಬಣ್ಣದ ರೇಟ್ ಹೆಚ್ಚಾಗಿದೆ ಎಂದು ಮೂರ್ತಿಯ ಬೆಲೆ ಹೆಚ್ಚಿಸಿದರೆ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಗುಡಿಗಾರರು ಹೇಳುತ್ತಾರೆ.
ರಾಮೇಶ್ವರ ನಗರದ ಶಾಂತಾರಾಮ ಗುಡಿಗಾರ ಕಳೆದ 25 ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದು, ಪ್ರತಿ ವರ್ಷ 40-45 ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಬೇಕಾಗುವ ದೊಡ್ಡ ಮೂರ್ತಿ ಹಾಗೂ ಮನೆಯಲ್ಲಿ ಆರಾಧಿಸುವ ಚಿಕ್ಕ ಗಣಪನನ್ನು ಸಹ ತಯಾರಿಸುತ್ತಾರೆ. ಅದೇ ರೀತಿ ಪಟ್ಟಣದ ನಾಲ್ಕೈದು ಕಲಾಕಾರರು ಮೂರ್ತಿ ತಯಾರಿಸಿ ಗ್ರಾಹಕರ ಬೇಡಿಕೆ ಇಡೇರಿಸುತ್ತಿದ್ದಾರೆ.
ಒಟ್ಟಾರೆ ಗ್ರಾಹಕರು ಮಾಡುವ ಚೌಕಾಶಿ ಮೂರ್ತಿ ತಯಾರಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೂರ್ತಿ ತಯಾರಿಕೆಗೆ ಬಳಸುವ ಬಣ್ಣದ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆ ಬೆಲೆ ಹೆಚ್ಚಿಸಿದರೆ ಮೂರ್ತಿ ಕೊಳ್ಳುವವರು ಇರುವುದಿಲ್ಲ. ಹೀಗಾಗಿ ಗ್ರಾಹಕರ ಬೇಡಿಕೆಯ ದರಕ್ಕೆ ಮೂರ್ತಿಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಮೂರ್ತಿ ತಯರಿಕರಿಗೆ ಎದುರಾಗಿದೆ.
ಗಣಪತಿ ಮೂರ್ತಿ ತಯಾರಿಕೆ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದೆ. ಮಣ್ಣಿನ ಮೂರ್ತಿಗೆ ಲೇಪಿಸುವ ಬಣ್ಣದ ದರ ಪ್ರಸಕ್ತ ಸಾಲಿನಲ್ಲಿ ಹೆಚ್ಚಾಗಿದೆ. ಆರೇಳು ಸಾವಿರ ಬಣ್ಣಕ್ಕಾಗಿ ಹೆಚ್ಚುವರಿ ಖರ್ಚು ತಗಲುತ್ತಿದೆ. ಆದರೆ ಇಲ್ಲಿಯ ಗ್ರಾಹಕರು ಮಾತ್ರ ದರದಲ್ಲಿ ತುಂಬಾ ಚೌಕಾಶಿ ಮಾಡುತ್ತಾರೆ. ಜಾಸ್ತಿ ರೇಟ್ ಹೇಳಿದರೆ ಒಯ್ಯುವವರಿಲ್ಲ. ಹಿಂದಿನಿಂದ ಮಾಡುತ್ತಿರುವ ಕಲೆಯಾಗಿರುವುದರಿಂದ ಬಿಡಲು ಆಗುತ್ತಿಲ್ಲ.
– ಶಾಂತಾರಾಮ ಗುಡಿಗಾರ, ಮೂರ್ತಿ ತಯಾರಕ.