ಬನವಾಸಿ: ದೇಶದ ಉತ್ಪನ್ನದಲ್ಲಿ ಶೇ.2ರಷ್ಟು ಅಂಶವನ್ನು ಕ್ರೀಡೆಗೆ ನೀಡುವುದರ ಜೊತೆಯಲ್ಲಿ ಕ್ರೀಡೆಗೆ ಬೇಕಾಗುವ ಸಲಕರಣೆಗಳು, ತರಭೇತಿದಾರರನ್ನು ಆಯೋಜಿಸಿದರೆ ನಮ್ಮ ದೇಶ ಕ್ರೀಡೆಯಲ್ಲಿ ಯಶಸ್ಸು ಕಾಣಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ಬನವಾಸಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 2022-23ನೇ ಸಾಲಿನ ಶಿರಸಿ ತಾಲೂಕಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ. ಕ್ರೀಡೆಯಲ್ಲಿ ಮುಂದಿರಬೇಕಾದ ಭಾರತ ಬಹಳಷ್ಟು ಹಿಂದುಳಿದಿರುವುದು ದುರದೃಷ್ಟಕರ. ಅಜಾದಿ ಕಾ ಅಮೃತಾಮಹೋತ್ಸವದ ಶುಭ ಸಂದರ್ಭದಲ್ಲಿ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 61ಪದಕ ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಭಾರತ ದಾಖಲೆ ಮಾಡಿದೆ. ನಮ್ಮ ದೇಶದ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಹೊರತುಪಡಿಸಿದರೆ ಪ್ರತಿ ಕ್ಷೇತ್ರದಲ್ಲಿಯೂ ಪ್ರತಿಭೆ ಹೊಂದಿದ್ದಾರೆ. ಹೊರ ರಾಷ್ಟ್ರಗಳು ಭಾರತದ ಬುದ್ಧಿವಂತಿಕೆಯ ಮಕ್ಕಳನ್ನು ತೆಗೆದುಕೊಂಡು ತಮ್ಮ ದೇಶದ ಪ್ರತಿಭೆ ಹೆಚ್ಚಿಸುತ್ತ ಕ್ರೀಡಾ ಕ್ಷೇತ್ರ ಮತ್ತು ವಿವಿಧ ರಂಗಗಳಲ್ಲಿ ಯಶಸ್ಸನ್ನು ಕಾಣುತ್ತಿವೆ. ವಿದ್ಯಾರ್ಥಿಗಳೇ ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಿ ತಮ್ಮ ಶಾಲೆಗೆ, ನಾಡಿಗೆ , ರಾಷ್ಟ್ರಕ್ಕೆ ಗೌರವ ತರುವ ಮಕ್ಕಳಾಗಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ರಾಜಶೇಖರ ಒಡೆಯರ್, ಶಿರಸಿ ಎ ಪಿ ಎಮ್ ಸಿ ಅಧ್ಯಕ್ಷ ಪ್ರಶಾಂತ ಗೌಡ, ದ್ಯಾಮಣ್ಣ ದೊಡ್ಮನಿ, ಮಂಗಳ ನಾಯ್ಕ್, ಉಷಾ ಕಬ್ಬೆರ, ಪ್ರಕಾಶ್ ಬಂಗ್ಲೆ, ಪೂರ್ಣಿಮಾ ಪಿಳ್ಳೈ ಹಾಗೂ ಪ್ರಮುಖರಿದ್ದರು. ವಿವಿಧ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.