ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ನಗರಸಭೆ ವಿರುದ್ಧ ಆಕ್ರೋಶ: ಹಣ್ಣುಗಳನ್ನು ರಸ್ತೆಗೆ ಎಸೆದ ವ್ಯಾಪಾರಿಗಳು

ಕಾರವಾರ: ನಗರಸಭೆಯವರು ಹಣ್ಣು ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೀದಿ ವ್ಯಾಪಾರಿಗಳು ಹಣ್ಣುಗಳನ್ನು ರಸ್ತೆಗೆ ಎಸೆದಿರುವ ಘಟನೆ ಗುರುವಾರ ಮಧ್ಯಾಹ್ನ ಕಾರವಾರ ನಗರದ ಸಿದ್ಧಿ ವಿನಾಯಕ ದೇವಸ್ಥಾನ ಎದುರು ನಡೆದಿದೆ.

ನಗರ ಸಭೆಯವರು ಹೂ ಹಾಗೂ ಹಣ್ಣು ವ್ಯಾಪಾರಕ್ಕಾಗಿ ಪ್ರತ್ಯೇಕ ಸ್ಥಳವನ್ನು ನಿಗದಿ ಪಡಿಸಿದ್ದು ರಸ್ತೆಯ ಬದಿಗೆ ವ್ಯಾಪಾರ ಮಾಡದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಸೂಚಿಸಿದ್ದರು. ಆದರೆ ಈ ಮೊದಲಿನಿಂದಲೂ ತಾವು ಇಲ್ಲೇ ವ್ಯಾಪಾರ ಮಾಡುತ್ತಿದ್ದು ಗ್ರಾಹಕರು ಇಲ್ಲೇ ಬರುತ್ತಾರೆ ಎಂದು ಮಹಿಳಾ ವ್ಯಾಪಾರಿಗಳು ನಗರದ ಸಿದ್ದಿವಿನಾಯಕ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದರು. ಹೀಗಾಗಿ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳು ತಾವು ಮಾರಾಟಕ್ಕೆ ತಂದಿದ್ದ ಹಣ್ಣುಗಳನ್ನು ವಶಕ್ಕೆ ಪಡೆಯಲು ಬಂದಿದ್ದಾರೆ ಎಂದು ಆರೋಪಿಸಿದ ವ್ಯಾಪಾರಿಗಳು ಬಾಳೆಹಣ್ಣು, ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಷ್ಟು ವರ್ಷ ತಾವು ಇಲ್ಲೇ ವ್ಯಾಪಾರ ಮಾಡುತ್ತಿದ್ದು ನಗರಸಭೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.