ಗೋಕರ್ಣ: ಮಳೆಗಾಲ ಬಂತೆಂದ್ರೆ ನಾನ್ ವೆಜ್ ಪ್ರಿಯರಿಗೆ ಖಷಿಯೋ ಖುಷಿ. ಮಳೆಗಾಲದ ಆರಂಭದಲ್ಲಿ ಗದ್ದೆ, ಹಳ್ಳ-ಕೊಳ್ಳ ಹೀಗೆ ಎಲ್ಲೆಂದ್ರಲ್ಲಿ ಬಗೆ ಬಗೆಯ ಮೀನು, ಏಡಿಗಳನ್ನು ಬೇಟೆಯಾಡಿ ತರುವುದೆಂದರೆ ಮಕ್ಕಳಿಗೆ ಅಪಾರ ಉತ್ಸಾಹ. ಅದ್ರಲ್ಲೂ ಕೂಡಾ ಸಿಕ್ಕಾಪಟ್ಟೆ ಕಾಂಪಿಟೇಶನ್ ಇರುತ್ತೆ. ನಂತರ ಅದನ್ನು ಮನೆಗೆ ತಂದು ರುಚಿಯಾದ ತಿನಿಸುಗಳನ್ನು ಮಾಡಿ ಸವಿದಾಗ ಮಾತ್ರ ಅವರಿಗೆ ನೆಮ್ಮದಿ.
ಇಂತಹುದೇ ಒಂದು ಯುವಕರ ದಂಡು ಸಮುದ್ರಕ್ಕೆ ದಾರಬಿಟ್ಟು ಜಾಲೆ (ಕಡಲ ಏಡಿ) ಬೇಟೆಯಾಡುವ ದೃಶ್ಯ ಕೆಲವು ದಿನಗಳಿಂದ ಗೋಕರ್ಣದ ರಾಮತೀರ್ಥ ಪರ್ವತ ಪ್ರದೇಶದಲ್ಲಿ ಕಂಡುಬರುತ್ತಿದೆೆ. ಮಳೆ ಕಡಿಮೆಯಾದ ಕಾರಣ ಉತ್ಸಾಹದಿಂದ ಜಾಲೆ ಹಿಡಿಯುವ ಕೆಲಸದಲ್ಲಿ ಯುವಕರು ನಿರತರಾಗಿದ್ದಾರೆ.
ಆಗಸ್ಟ್ ತಿಂಗಳು ಬಂತೆಂದ್ರೆ ಸಾಕು. ಸಾಮಾನ್ಯವಾಗಿ ಸಮುದ್ರ ದಡಕ್ಕೆ ಬರುವ ‘ಕಡಲ ಏಡಿ’ಗೆ ಬೇಡಿಕೆ ಹೆಚ್ಚು. ಈ ತಿಂಗಳಲ್ಲಿ ಜಾಲೆಯದೇ ಹಂಗಾಮು. ನಂತರದ ದಿನಗಳಲ್ಲಿ ಅವು ಸಮುದ್ರದ ಮಧ್ಯೆ ತೆರಳುತ್ತವೆ. ಆ ಸಮಯದಲ್ಲಿ ಮೀನುಗಾರಿಕೆಗೆ ಹೋದವರು ಮಾತ್ರ ಇದನ್ನು ಹಿಡಿದು ತಂದು ಮಾರಾಟ ಮಾಡುತ್ತಾರೆ.
ಆದರೆ ಇಲ್ಲಿನ ಸಮುದ್ರದ ಅಂಚಿನ ಬಂಡೆ ಹಾಗೂ ಗುಡ್ಡದ ಅಂಚಿನಲ್ಲಿ ನಿಂತು ಬಲೆ ಬೀಸುವುದು ಬಲು ವಿಶಿಷ್ಟವಾಗಿರುತ್ತದೆ. ನೈಲಾನ್ ದಾರಕ್ಕೆ ಮೀನುಗಳ ತುಂಡು ಮತ್ತು ಕಲ್ಲನ್ನು ಕಟ್ಟಿ ಅದಕ್ಕೆ ಬಲೆ ಸುತ್ತಿ ಬಿಡಲಾಗುತ್ತದೆ. ಆ ಮೀನು ತಿನ್ನುವ ಆಸೆಗೆ ಬರುವ ಜಾಲೆಗಳು ಬಲೆಗೆ ಬೀಳುತ್ತದೆ.
ನಂತರ ಇವುಗಳನ್ನು ಮನೆಯ ಆಹಾರಕ್ಕೆ ಬಳಸುವುದು ವಿಶೇಷ. ಸಾಂಬಾರು, ಚಟ್ನಿ, ಸುಕ್ಕಾ ಮುಂತಾದ ರುಚಿಕರ ಪದಾರ್ಥ ತಯಾರಿಸಿ ಮನೆಯಲ್ಲಿ ಭರ್ಜರಿ ಮಳೆಗಾಲದ ವಿಶೇಷ ಭೋಜನೆ ಮಾಡುವುದು ವಾಡಿಕೆಯಾಗಿದೆ. ಬಹುಮುಖ್ಯವಾಗಿ ಹಾಲಕ್ಕಿ ಸಮುದಾಯದವರೇ ಹೆಚ್ಚಾಗಿ ಈ ಬೇಟೆಯಾಡುತ್ತಾರೆ.
ಇನ್ನು ಈ ಜಾಲೆಯ ಕೊಂಬು ಸಮೇತ ಇದ್ದರೆ ಅಪಾರ ಬೇಡಿಕೆ. ಕೊಂಬು ಸಹಿತ ಫ್ರೈ ಮಾಡಿ ಸ್ಟಾರ್ ಹೊಟೇಲ್‌ಗಳಲ್ಲಿ ರುಚಿಕರ ಆಹಾರ ತಯಾರಿಸಲಾಗುತ್ತದೆ. ದೊಡ್ಡ ಗಾತ್ರದ ಜಾಲೆಗೆ ಬಹುಬೇಡಿಕೆ ಇದ್ದು, ಒಂದು ಪ್ಲೇಟ್‌ಗೆ ಒಂದು ಸಾವಿರ ರೂಪಾಯಿ ಬೆಲೆಯೂ ಇದೆ. ಜಾಲೆ ಕೊಂಬು ಸಮೇತವಾಗಿ ಸಿಕ್ಕರೆ ಮಾತ್ರ ಲಾಭ ಇಲ್ಲವಾದರೆ ಮಾರಟವಾಗುವುದಿಲ್ಲ ಎನ್ನುತ್ತಾರೆ ಮೀನುಗಾರರು.
ಒಟ್ಟಾರೆ ಮಳೆಗಾಲದಲ್ಲಿ ಸಿಗುವ ನಾನಾ ರುಚಿಕರ ತರಕಾರಿಗಳಂತೆ ಸಮುದ್ರದಲ್ಲಿ ಸಿಗುವ ಜೀವಿಗಳಿಗೂ ಅಷ್ಟೇ ಬೇಡಿಕೆಯಿದೆ. ಜಾಲೆಗಳನ್ನು ಬೇಟೆಯಾಡಿ ತಂದು ರುಚಿಕರ ಅಡುಗೆ ಮಾಡಿ ಜನರು ಸವಿಯುವುದು ಕೂಡ ಮೀನುಗಾರರಿಗೆ ಖುಷಿಯ ಸಂಗತಿ.