ಬೆಂಗಳೂರು: ಸುಪ್ರಿಂಕೋರ್ಟ್ ಆದೇಶದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ಮೊದಲ ಹೆಜ್ಜೆ ಇಟ್ಟಿದ್ದು ಸಪ್ಟೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
243 ವಾರ್ಡ್ಗಳ ಲಿಸ್ಟ್ ರಿಲೀಸ್
ಆಗಸ್ಟ್ 4 ರ ಒಳಗೆ ಬಿಬಿಎಂಪಿ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸುವಂತೆ ಸುಪ್ರಿಕೋರ್ಟ್ ಸೂಚನೆ ನೀಡಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರ ಒಂದು ದಿನ ಮೊದಲೇ ಪಟ್ಟಿ ಪ್ರಕಟಿಸಿದ್ದು ಈ ಹಿಂದೆ 198 ಇದ್ದ ವಾರ್ಡ್ಗಳ ಸಂಖ್ಯೆ ಈ ಬಾರಿ 243ಕ್ಕೆ ಏರಿಕೆ ಮಾಡಲಾಗಿದೆ. ಹೊಸದಾಗಿ 45 ವಾರ್ಡ್ಗಳನ್ನು ಸೇರ್ಪಡೆ ಮಾಡಿ ಬಿಬಿಎಂಪಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ.
ಬಿಬಿಎಂಪಿ ಮೀಸಲಾತಿ ಪಟ್ಟಿ
ಸಾಮಾನ್ಯ ವರ್ಗಕ್ಕೆ 65 ವಾರ್ಡ್ಗಳಲ್ಲಿ ಮೀಸಲಾತಿ ಕೊಡಲಾಗಿದೆ. ಸಾಮಾನ್ಯ ವರ್ಗದ ಮಹಿಳೆಗೆ 63 ವಾರ್ಡ್ಗಳಲ್ಲಿ ಮೀಸಲಾಗಿ ಘೋಷಿಸಲಾಗಿದೆ. ಹಿಂದುಳಿದ ವರ್ಗ (ಎ) 32, ಹಿಂದುಳಿದ ವರ್ಗ (ಎ) ಮಹಿಳೆಗೆ 34, ಹಿಂದುಳಿದ ವರ್ಗ (ಬಿ) 6 ವಾರ್ಡ್ಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ. ಪರಿಶಿಷ್ಟ ಜಾತಿ 14, ಪರಿಶಿಷ್ಟ ಜಾತಿ ಮಹಿಳೆಗೆ 14 ವಾರ್ಡ್ಗಳಲ್ಲಿ, ಪರಿಶಿಷ್ಟ ಪಂಗಡಕ್ಕೆ 2 ವಾರ್ಡ್ಗಳಲ್ಲಿ, ಪರಿಶಿಷ್ಟ ಪಂಗಡದ ಮಹಿಳೆಗೆ 1 ವಾರ್ಡ್ನಲ್ಲಿ ಮೀಸಲಾತಿ ಘೋಷಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇನ್ನು ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಅವಕಾಶವನ್ನು ನೀಡಲಾಗಿದೆ. ಯಾವುದೇ ತಕರಾರಿದ್ದರೂ ಸರ್ಕಾರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 7 ದಿನಗಳ ನಂತರ ಬಂದ ಯಾವುದೇ ಅಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಆದೇಶ ಹೊರಡಸಿದ್ದಾರೆ.