ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ ಭಟ್ಕಳ ತಾಲೂಕನ್ನು ಹೈರಾಣಾಗಿಸಿದೆ. ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಭೂ ಸಮಾಧಿಯಾದರೆ ಮನೆಗಳಿಗೆ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ಥವಾಗಿಸಿದ್ದು ಜನರ ನೆಮ್ಮದಿ ಕಸಿದಿದೆ. ಇವತ್ತು ಮಳೆ ಸೃಷ್ಟಿಸಿದ ಅವಾಂತರದ ಸಮಗ್ರ ಚಿತ್ರಣ ಇಲ್ಲಿದೆ.
ಭಟ್ಕಳದಲ್ಲಿ ಅಬ್ಬರಿಸಿದ ವರುಣ.! ಒಂದೇ ದಿನ 533 ಮಿ.ಮೀ ಮಳೆ
ಎಲ್ಲಿ ನೋಡಿದರಲ್ಲಿ ಜನವಸತಿ ಪ್ರದೇಶದಲ್ಲಿ ತುಂಬಿ ತುಳುಕಿದ ನೀರು, ವರುಣನ ಅಬ್ಬರಕ್ಕೆ ಕುಸಿದ ಗುಡ್ಡ. ಹೌದು ಇದು ಕರಾವಳಿ ಭಾಗದ ಭಟ್ಕಳ ನಗರದ ನರಕ ಸದೃಶ ದೃಶ್ಯ. ರಾತ್ರಿ ಕಳೆದು ಬೆಳಗಾಗುವುದರೊಳಗೆ 533 ಮೀಟರ್ ಮಳೆ ಸುರಿದಿದ್ದರಿಂದ ಭಟ್ಕಳದಲ್ಲಿ ಸೂರ್ಯ ಉದಯಿಸುವ ಹೊತ್ತಿಗೆ ಹಲವು ಗ್ರಾಮಗಳು ಜಲಾವೃತವಾಗಿದ್ದವು.
ಮುಟ್ಟಳ್ಳಿಯಲ್ಲಿ ಗೌರಮ್ಮಜ್ಜಿ ಮನೆ ಕುಸಿತ.! ಭೂಸಮಾಧಿಯಾದ ಒಂದೇ ಕುಟುಂಬದ ನಾಲ್ವರು
ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮುಂಜಾನೆ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ಕು ಜನ ಭೂಸಮಾಧಿಯಾಗಿದ್ದಾರೆ. ಲಕ್ಷ್ಮಿ ನಾರಾಯಣ ನಾಯ್ಕ(60) ,ಲಕ್ಷ್ಮಿ ನಾಯ್ಕ(45), ಅನಂತನಾರಾಯಣ ನಾಯ್ಕ (38) ಹಾಗೂ ಲಕ್ಷ್ಮಿ ನಾರಾಯಣ ನಾಯ್ಕರವರ ಸೋದರಿ ಪುತ್ರ ಪ್ರವೀಣ್ ನಾಯ್ಕ(16) ಮೃತಪಟ್ಟಿದ್ದಾರೆ. ಹಲವು ಸಮಯದ ಕಾರ್ಯಾಚರಣೆ ನಂತರ ಇವರ ಮೃತದೇಹವನ್ನು ಅಗ್ನಿಶಾಮಕದಳ ಸಿಬ್ಬಂದಿ, ಎಸ್.ಡಿ.ಆರ್.ಎಫ್ ಪಡೆ, ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ
ಇನ್ನು ಮೇಘಸ್ಪೋಟದಿಂದಾಗಿ ತಾಲೂಕಿನ ಮುಟ್ಟಳ್ಳಿ, ಮುಡಭಟ್ಕಳ, ಮುಂಡಳ್ಳಿ ಚೌಥನಿ, ಬೆಳ್ನಿ, ಶಿರಾಲಿ, ಪಡುಶಿರಾಲಿ, ತೆಂಗಿನಗುಂಡಿ ಸೇರಿದಂತೆ ಇತರೆ ಗ್ರಾಮೀಣ ಪ್ರದೇಶಗಳು ಜಲಾವೃತವಾಗಿ ಮನೆಗಳು ಮುಳಗಿಹೋಗಿವೆ. ಅಲ್ಲದೇ ಚತುಷ್ಪತ ಹೆದ್ದಾರಿ ಕಳಪೆ ಕಾಮಗಾರಿಯಿಂದ ಭಟ್ಕಳದ ಮುಖ್ಯರಸ್ತೆಯಲ್ಲೂ ಕೂಡ ನೀರು ಹೊಳೆಯಂತೆ ಹರಿದಿದ್ದು ಕೆಲವು ಕಾಲ ಚತುಷ್ಪತ ಹೆದ್ದಾರಿ ಸಂಚಾರ ವ್ಯತ್ಯಯವಾಗಿತ್ತು.
ಕಡವಿನಕಟ್ಟಾ ರೈಲ್ವೆ ಸುರಂಗದ ಬಳಿ ಗುಡ್ಡ ಕುಸಿತ
ಕಡವಿನಕಟ್ಟಾ ಕ್ರಾಸ್ ಹತ್ತಿರ ರೈಲ್ವೆ ಅಂಡರ್ ಪಾಸ್ ಬಳಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿದು ಹಳಿಗಳ ಮೇಲೆ ಬಿದ್ದು ರೈಲ್ವೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ಕೈಗೊಂಡರು. ಕಾರ್ಯಾಚರಣೆ ಬಳಿಕ ರೈಲ್ವೆ ಸಂಚಾರ ಪುನರಾರಂಭವಾಯಿತು.
ಹಲವು ಗ್ರಾಮಗಳು ಮುಳಗಡೆ.! ಜನರನ್ನ ಸ್ಥಳಾಂತರಿಸಿದ ರಕ್ಷಣಾ ತಂಡ
ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ ಬೆಂಗ್ರೆ ಹಾಗೂ ಮತ್ತಿತರ ಜಲಾವೃತ ಗ್ರಾಮಗಳಲ್ಲಿನ ಜನರನ್ನು ಅಗ್ನಿಶಾಮಕ, ಎನ್.ಡಿ.ಆರ್.ಎಫ್ ತಂಡ, ಪೋಲಿಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು. ಪಡುಶಿರಾಲಿಯಲ್ಲಿ ಗ್ರಾಮಗಳು ಮುಳುಗಡೆಯಾಗಿದ್ದು 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿತ್ತು. ಶಿರಾಲಿ ಚಂಡಮಾರುತ ಆಶ್ರಯತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಬೆಳ್ಳಬೆಳಗ್ಗೆ ಭಟ್ಕಳದಲ್ಲಿ ಸುರಿದ ಭಾರೀ ಮಳೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ ಹೊರಡಿಸಿದ್ದರು.
ಮಳೆಹಾನಿ ಪ್ರದೇಶಕ್ಕೆ ಶಾಸಕ ಸುನೀಲ್ ನಾಯ್ಕ್ ಭೇಟಿ
ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಸುನೀಲ ನಾಯ್ಕ ಹಾಗೂ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾದರು.
ರಕ್ಷಣಾ ಕಾರ್ಯಾಚರಣೆಗೆ ಎಸ್.ಡಿ.ಆರ್.ಎಫ್ ತಂಡ
ಇನ್ನು ಕುಮಟಾದಿಂದ ಎಸ್ ಡಿಆರ್ ಎಫ್ ತಂಡ ಭಟ್ಕಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಭೀಕರ ಅಲೆಗೆ ಲಂಗರು ಹಾಕಿದ್ದ ದೋಣಿಗಳು ಸಮುದ್ರಪಾಲು
ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಭಟ್ಕಳದಲ್ಲಿ ಸುರಿದಿದೆ. ಪರಿಣಾಮವಾಗಿ ಇಲ್ಲಿನ ವೆಂಕಟಾಪುರದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗಿ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಮುಂಡಳ್ಳಿಯ ಹಾವಳಿಕಂಠ, ಬೆಳ್ನಿ, ತೆಂಗಿನಗುಂಡಿ, ಅಳ್ವೆಕೋಡಿ ಭಾಗದಲ್ಲಿರುವ ಮೀನುಗಾರರು ಸಂಕಷ್ಟ ಎದುರಿಸಿದ್ದಾರೆ. ನದಿ ದಂಡೆ ಪ್ರದೇಶದಲ್ಲಿರುವ ಮೀನುಗಾರರ ಹಲವು ದೋಣಿಗಳು. ಬಲೆಗಳು ಕೂಡ ತೇಲಿ ಹೋಗಿವೆ. ಕೆಲವರು ಮನೆಯ ಮಹಡಿಯ ಮೇಲೆ ಹತ್ತಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಅಲ್ಲಲ್ಲಿ ದೋಣಿಗಳನ್ನ ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.
ಸ್ಥಳಕ್ಕೆ ಡಿಸಿ ಮುಲ್ಲೈ ಮುಗಿಲನ್ ಭೇಟಿ
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆಯಾಗಿ ಭಟ್ಕಳದಲ್ಲಿ ನಾಲ್ಕು ಕಾಳಜಿ ಕೇಂದ್ರಗಳನ್ನ ತೆರೆದು 304 ಜನರಿಗೆ ಆಶ್ರಯ ನೀಡಲಾಗಿದೆ.
ಒಟ್ಟಾರೆ ಭಟ್ಕಳದಲ್ಲಿ ಒಂದೇ ದಿನ ಸುರಿದ ಅಬ್ಬರದ ಮಳೆ ಸಾವು ನೋವುಗಳನ್ನು ತರುವ ಜೊತೆ ಭಟ್ಕಳ ಜನರ ನೆಮ್ಮದಿ ಕಸಿದಿದೆ.