ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗುವ ಸಲುವಾಗಿ ಉಪರಾಷ್ಟ್ರಪತಿ ಹುದ್ದೆಗೆ ನಾನು ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು. ನಗರದಲ್ಲಿ ಮಂಗಳವಾರ ವರ್ಚುವಲ್ ಸುದ್ದಿಗೋಷ್ಠಿ ಮೂಲಕ ಮಾತನಾಡಿದ ಅವರು, ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಬೇಕು. ಈ ಚುನಾವಣೆಗೆ ವಿಪ್ ಜಾರಿಯಾಗುವುದಿಲ್ಲ. ಗುಪ್ತ ಮತದಾನ ಇರುವ ಕಾರಣ ಬಿಜೆಪಿಯನ್ನೂ ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
‘ನಾನು ಕರ್ನಾಟಕದ ಮಗಳು, ನನಗೆ ಎಲ್ಲರ ಆಶೀರ್ವಾದ ಬೇಕು’
ಎಲೆಕ್ಷನ್ ವಾತಾವರಣ ಉತ್ತಮವಾಗಿದೆ. ಕ್ಯಾಂಪೇನ್ ಈಗ ಚಾಲೆಂಜ್ ಆಗಿದೆ ಎಂದ ಅವರು, ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನವನ್ನು ನಾನು ಪಕ್ಷದಲ್ಲಿ ಕೇಳಿಲ್ಲ. ಎಂದಿನAತೆ ಕೆಲಸ ಮುಗಿಸಿ ಶಿರಸಿಗೆ ಬರಲು ಸಿದ್ಧನಾಗಿದ್ದೆ. ಆದರೆ, ಎಲ್ಲರೂ ಸೇರಿ ನನ್ನನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿದ್ದಾರೆ. ವಿರೋಧ ಪಕ್ಷಗಳೂ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ನನ್ನನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. 20 ಪಕ್ಷಗಳು ಒಂದಾಗಿ ನನ್ನನ್ನು ಬೆಂಬಲಿಸಿವೆ. ಇನ್ನೊಂದೆರಡು ಪಕ್ಷ ತೀರ್ಮಾನಿಸಬೇಕಿದೆ ಎಂದರು.
ಪಾರ್ಲಿಮೆಂಟ್ ನಲ್ಲಿ ಇಂದು ಅರಾಜಕತೆಯೇ ಜಾಸ್ತಿ ಇದೆ. ಮೂರು ವಾರದಿಂದ ಬೆಲೆ ಏರಿಕೆ, ಜಿಎಸ್‌ಟಿ ಮೇಲೆ ಚರ್ಚೆಗೆ ಅವಕಾಶ ಕೇಳಿದರು. ಆದರೆ, ಬಿಜೆಪಿ ಜಿ ಎಸ್ ಟಿ ಸೇರಿದಂತೆ ತನ್ನ ನಿರ್ಧಾರಗಳನ್ನು ಒತ್ತಡದಿಂದ ಜಾರಿಗೆ ತರಲು ಯತ್ನಿಸುತ್ತಿದೆ.ಇವತ್ತಿನ ಪಾರ್ಲಿಮೆಂಟ್ ನೋ ಡಿಬೆಟ್, ನೋ ಡಿಸ್ಕಶನ್ ಎಂಬಂತಾಗಿದೆ. 27 ಸದಸ್ಯರನ್ನು ಸಸ್ಪೆಂಡ್ ಮಾಡಿ ಹೊರಗಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.