ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಿದುಬಂದ ಭಕ್ತಸಾಗರ

ಹೊನ್ನಾವರ: ತಾಲೂಕಿನ ವಿವಿಧೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಪುರಾಣ ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಪಂಚಮಿ ಪ್ರಯುಕ್ತ ಮಂಗಳವಾರ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯವು ನಾಗಾರಾಧನೆಗೆ ಪುಣ್ಯ ಕ್ಷೇತ್ರವಾಗಿದ್ದು, ನಾಗರಪಂಚಮಿ ಆಚರಣೆ ಎಂದರೆ ಒಂದು ರೀತಿಯ ಜಾತ್ರೆಯೇ ಏರ್ಪಡುತ್ತದೆ. ಬೆಳಿಗ್ಗೆಯಿಂದ ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಾಭರಣ ಸೇವೆ, ನಾಗ ಮಂತ್ರಾಭಿಷೇಕ, ರುದ್ರಾಭಿಷೇಕ ಇತ್ಯಾದಿ ಸೇವೆಗಳು ನಡೆದವು.

ನಾಗಬನವು ಶ್ರೀ ಕ್ಷೇತ್ರಕ್ಕೆ ಹೋಗುವ ದ್ವಾರದಲ್ಲಿದ್ದು, ನಾಗರಪಂಚಮಿಯಂದು ವಿಶೇಷ ಪೂಜೆ, ಅಭಿಷೇಕನ್ನು ನೆರವೇರಿಸಲಾಗುತ್ತದೆ. ವಿಶೇಷವಾಗಿ ಭಕ್ತರು ಹರಕೆ ಹಾಗೂ ಭಕ್ತಿಪೂರ್ವಕವಾಗಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳವಾದ ‘ನಾಗಬನ’ವು ಇಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಆಡಳಿತ ಮಂಡಳಿಯವರು ವಿವಿಧ ಸೇವಾ ಕೌಂಟರ್ ತೆರೆದು ಜನದಟ್ಟಣೆ ಆಗದಂತೆ ಕ್ರಮ ವಹಿಸಿದ್ದರು. ಜಿಲ್ಲೆಯ ವಿವಿಧಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.